ನವದೆಹಲಿ: ಹರಿಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶದ ಟ್ರೆಂಡ್ ಪ್ರಕಟಿಸುವಲ್ಲಿ ಚುನಾವಣಾ ಆಯೋಗದ ಮೇಲೆ ಕೇಂದ್ರ ಸರ್ಕಾರ ಪ್ರಭಾವ ಬೀರುತ್ತಿದೆ. ಆಯೋಗವು ಸರ್ಕಾರದ ಸುಪರ್ದಿಯಂತೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನು ಚುನಾವಣಾ ಆಯೋಗ ತಳ್ಳಿಹಾಕಿದೆ. "ಇದೊಂದು ಶುದ್ಧ ಬೇಜವಾಬ್ದಾರಿ, ಆಧಾರರಹಿತ ಆರೋಪ" ಎಂದು ಸ್ಪಷ್ಟನೆ ನೀಡಿದೆ.
ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶದ ಟ್ರೆಂಡ್, ಪಕ್ಷದ ಮುನ್ನಡೆಯ ಕುರಿತು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಇದನ್ನು ಬೇಕಂತಲೇ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ದೂರಿದ್ದರು. ಈ ಬಗ್ಗೆ ಆಯೋಗಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯಿಸಿದ್ದು, ಪ್ರತಿ 25 ಸುತ್ತುಗಳ ನಂತರ ಫಲಿತಾಂಶದ ಟ್ರೆಂಡ್ ಅನ್ನು ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದಿದೆ.
ಫಲಿತಾಂಶದ ಮೇಲೆ ಸರ್ಕಾರ ಅಥವಾ ಯಾವುದೇ ವ್ಯಕ್ತಿ ಪರಿಣಾಮ ಬೀರಲು ಸಾಧ್ಯವಿಲ್ಲ. ಎಣಿಕೆ ಪ್ರಕ್ರಿಯೆಯು ವೀಕ್ಷಕರು ಮತ್ತು ಸೂಕ್ಷ್ಮ ವೀಕ್ಷಕರ ಸಮ್ಮುಖದಲ್ಲಿ ನಡೆಯುತ್ತದೆ. ಇದನ್ನು ಬದಲಿಸಲು ಸಾಧ್ಯವಿಲ್ಲ. ಯಾವುದೇ ಕ್ಷೇತ್ರಗಳಲ್ಲಿ ವಿಳಂಬದ ಬಗ್ಗೆ ವ್ಯತಿರಿಕ್ತ ಫಲಿತಾಂಶಗಳು ಬಂದಿಲ್ಲ. ಇದಕ್ಕೆ ಯಾವುದೇ ದಾಖಲೆಗಳೂ ಇಲ್ಲ ಎಂದಿು ಹೇಳಿದೆ.
ಪ್ರತಿ 5 ನಿಮಿಷಕ್ಕೊಮ್ಮೆ ಅಪ್ಡೇಟ್: 25 ಸುತ್ತುಗಳು ಪೂರ್ಣಗೊಂಡ ನಂತರ, ಪ್ರತಿ 5 ನಿಮಿಷದಂತೆ ವೆಬ್‌ಸೈಟ್‌ನಲ್ಲಿ ಪಕ್ಷಗಳ ಬಲಾಬಲದ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಎಣಿಕೆ ಪ್ರಕ್ರಿಯೆಯನ್ನು ಈ ಹಿಂದಿಗಿಂತಲೂ ತ್ವರಿತ ರೀತಿಯಲ್ಲಿ ಪ್ರಕಟಿಸಲಾಗುತ್ತಿದೆ ಎಂದು ಆಯೋಗ ಸ್ಪಷ್ಟನೆ ನೀಡಿದೆ.
ಅಲ್ಲದೇ, ನಿಮ್ಮ ಆರೋಪಗಳು ಬೇಜವಾಬ್ದಾರಿ, ಆಧಾರರಹಿತ ಮತ್ತು ದೃಢೀಕರಿಸಲಾಗದ ದುರುದ್ದೇಶಪೂರಿತವಾಗಿವೆ. ಎಣಿಕೆ ಪ್ರಕ್ರಿಯೆಯನ್ನು ಶಾಸನಬದ್ಧವಾಗಿ ಮತ್ತು ನಿಯಮಗಳ ಚೌಕಟ್ಟಿನಲ್ಲಿ ನಡೆಸಲಾಗುತ್ತಿದೆ. ನೀವು ಆರೋಪಿಸಿದಂತೆ ಯಾವುದೇ ವಿಳಂಬ ಮಾಡಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕಾಂಗ್ರೆಸ್ ಆರೋಪವೇನು?: ಮತ ಎಣಿಕೆಯಲ್ಲಿ ವಿಳಂಬ ಮಾಡುವ ಮೂಲಕ ಬಿಜೆಪಿ ಪ್ರಕ್ರಿಯೆಯ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದೆ. 10 ಸುತ್ತುಗಳ ಫಲಿತಾಂಶಗಳು ಮುಗಿದರೂ, ಐದು ಸುತ್ತುಗಳ ಫಲಿತಾಂಶ ಮಾತ್ರ ಪ್ರಕಟಿಸಲಾಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್ ಮೇಲೂ ಸರ್ಕಾರ ಪ್ರಭಾವ ಬೀರುವ ತಂತ್ರವಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಮಾಧ್ಯಮಗಳ ಎದುರು ಆರೋಪಿಸಿದ್ದರು.
ಇದರ ಜೊತೆಗೆ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, 'ಲೋಕಸಭೆಯಂತೆ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್ ಟು ಡೇಟ್ ಟ್ರೆಂಡ್‌ಗಳನ್ನು ಅಪ್‌ಲೋಡ್ ಮಾಡುವಲ್ಲಿ ನಿಧಾನಗತಿ ಕಾಣುತ್ತಿದ್ದೇವೆ. ಇದು ಬಿಜೆಪಿಯು ಒತ್ತಡವನ್ನು ಹೇರುವ ಪ್ರಯತ್ನವಾಗಿದೆಯೇ? ಹಳೆಯ ಮತ್ತು ತಪ್ಪುದಾರಿಗೆಳೆಯುವ ಫಲಿತಾಂಶವನ್ನು ಹಂಚಿಕೊಳ್ಳುವ ತಂತ್ರ ಇದಾಗಿದೆ' ಎಂದು ಹೇಳಿದ್ದರು.