ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಗದೊಂದು ಸಮನ್ಸ್ ಜಾರಿ ಮಾಡಲಾಗಿದ್ದು ಇಂದು ಹಾಜರಬೇಕಿದೆ. ಸೋಮವಾರ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ 7ನೇ ಸಮನ್ಸ್ ಕಳುಹಿಸಲಾಗಿತ್ತು. ಆದರೆ, ಅವರು ಸದ್ಯಕ್ಕೆ ಹಾಜರಾಗುವುದಿಲ್ಲ ಎಂದು ಕೆಲವು ಕಾರಣಗಳ ಸಹಿತ ಆಪ್ ಸ್ಪಷ್ಟನೆ ನೀಡಿದೆ.
''ಪ್ರಕರಣ ದೆಹಲಿ ಹೈಕೋರ್ಟ್‌ನಲ್ಲಿದೆ. ಮಾರ್ಚ್ 16ಕ್ಕೆ ವಿಚಾರಣೆ ಕೂಡ ನಿಗದಿಪಡಿಸಲಾಗಿದೆ. ತೀರ್ಪು ಬಂದ ಬಳಿಕವೇ ನಿರ್ಧರಿಲಾಗುವುದು. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ. ಸಂಸ್ಥೆಯು ಪದೇ ಪದೆ ಸಮನ್ಸ್ ನೀಡುವ ಬದಲು ನ್ಯಾಯಾಲಯದ ಆದೇಶಕ್ಕಾಗಿ ಕಾಯಬೇಕು. ಹೀಗೆ ಮಾಡುವುದರಿಂದ ಆಮ್ ಆದ್ಮಿ ಪಕ್ಷ ಇಂಡಿಯಾ ಮೈತ್ರಿಯಿಂದ ಹೊರ ಬರಲಿದೆ ಎಂದು ತಿಳಿದಿದ್ದರೆ ಅದು ನಿಮ್ಮ ಕನಸು. ಯಾವುದೇ ಕಾರಣಕ್ಕೂ ಆಪ್ ಮೈತ್ರಿಯಿಂದ ಹೊರಗೆ ಬರದು. ಅಲ್ಲದೇ ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ ಕೂಡ ನಡೆಯುತ್ತಿದೆ. ಜೊತೆಗೆ ಅಬಕಾರಿ ನೀತಿ ಹಗರಣ ಹೈಕೋರ್ಟ್ ಮುಂದೆ ಇದೆ. ಎಲ್ಲವೂ ಗೊತ್ತಿದ್ದೂ ಕೇಂದ್ರ ಸರ್ಕಾರ ಈ ರೀತಿ ಒತ್ತಡ ಹೇರಬಾರದು. ಅಂತಹ ಪರಿಸ್ಥಿತಿಯಲ್ಲಿ ಇಡಿ ಕಳುಹಿಸಿರುವ ಸಮನ್ಸ್‌ಗೆ ಯಾವುದೇ ಅರ್ಥವಿಲ್ಲ. ಹೀಗಾಗಿ ಇಡಿ ಕಳುಹಿಸಿರುವ ಸಮನ್ಸ್‌ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಜರಾಗುವ ಬಗ್ಗೆ ಇಂದಿಗೂ ಅನುಮಾನವಿದೆ'' ಎಂದು ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಇನ್ನು ಮೇಲಿಂದ ಮೇಲೆ ಸಮನ್ಸ್ ಕಳುಹಿಸುತ್ತಿರುವ ಇಡಿಗೆ ಪತ್ರ ಬರೆದಿರುವ ಎಎಪಿ ರಾಷ್ಟ್ರೀಯ ಸಂಚಾಲಕರು, ಕಳುಹಿಸಿರುವ ಸಮನ್ಸ್ಗಳನ್ನು ಹಿಂಪಡೆಯುವಂತೆ ಕೋರಿದ್ದಾರೆ.
ದೆಹಲಿ ಮದ್ಯ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಯಾಗಿದ್ದು, ಈ ಮದ್ಯ ನೀತಿಯ ಕರಡನ್ನು ಅವರ ಮನೆಯಲ್ಲಿ ಮಾಡಲಾಗಿದೆ. ಸಂಪೂರ್ಣ ವಿಷಯ ಅವರ ಅರಿವಿಗೆ ಬಂದಿದೆ. ಹಗರಣದ ತನಿಖೆ ನಡೆಸುತ್ತಿರುವ ಇಡಿ, ನವೆಬಂರ್ 2 ರಂದು ಅವರಿಗೆ ಮೊದಲ ಸಮನ್ಸ್ ಕಳುಹಿಸಿತ್ತು. ಇದಾದ ನಂತರ ಡಿಸೆಂಬರ್ 21ಕ್ಕೆ 2ನೇ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಬಳಿಕ ಈ ವರ್ಷದ ಆರಂಭ ಜನವರಿ 18, ಫೆಬ್ರವರಿ 2 ಹಾಗೂ ಫೆಬ್ರವರಿ 19 ರಂದು ಸಮನ್ಸ್ ನೀಡಿತ್ತು. ಫೆಬ್ರವರಿ 21 ರಂದು ಸಮನ್ಸ್ ನೀಡಿರುವ ಇಡಿ, ಫೆ.26ರಂದು ವಿಚಾರಣೆಗೆ ಹಾಜರಾಗುವಂತೆ 7ನೇ ಸಮನ್ಸ್ ಕೂಡಾ ನೀಡಿತ್ತು.
"ಈ ವಿಷಯದ ಗಂಭೀರತೆ ಅರ್ಥಮಾಡಿಕೊಂಡ ನ್ಯಾಯಾಲಯ, ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಮಾರ್ಚ್ 16 ರವರೆಗೆ ಕಾಲಾವಕಾಶವನ್ನೂ ನೀಡಿದೆ. ಆದರೆ, ನ್ಯಾಯಾಲಯದ ಆದೇಶದ ನಡುವೆಯೂ ಇಡಿ ತರಾತುರಿಯಲ್ಲಿ ಏಕೆ ಸಮನ್ಸ್ ನೀಡುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಇಡಿ ಮತ್ತೊಮ್ಮೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ಕಳುಹಿಸಿದೆ. ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸಬೇಕಾದರೆ ನ್ಯಾಯಾಲಯವನ್ನು ಸಂಪರ್ಕಿಸುವ ಅಗತ್ಯವೇನು? ನಿಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇಲ್ಲವೇ? ನ್ಯಾಯಾಲಯದ ಆದೇಶದ ಹೊರತಾಗಿಯೂ ಇಡಿ ಈ ರೀತಿ ಸಮನ್ಸ್ ಕಳುಹಿಸುವ ಮೂಲಕ ಅರವಿಂದ್ ಕೇಜ್ರಿವಾಲ್‌ಗೆ ಕಿರುಕುಳ ನೀಡುತ್ತಿದೆ" ಎಂದಿರುವ ಸೌರಭ್ ಭಾರದ್ವಾಜ್, ಈ ಹಿಂದೆಯೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪ್ರಕರಣವು ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿರುವಾಗ ಹೊಸ ಸಮನ್ಸ್ ನೀಡುವುದು ತಪ್ಪು ಎಂಬ ಕೇಜ್ರಿವಾಲ್ ವಾದವನ್ನು ತಿರಸ್ಕರಿಸಿದ್ದ ಜಾರಿ ನಿರ್ದೇಶನಾಲಯವು ಏಳನೇ ಸಮನ್ಸ್ ಜಾರಿ ಮಾಡಿತ್ತು.
ಇದನ್ನೂ ಓದಿ: ಅಬಕಾರಿ ನೀತಿ ಹಗರಣ: ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 7ನೇ ಸಮನ್ಸ್, 26 ರಂದು ವಿಚಾರಣೆಗೆ ಬರಲು ಸೂಚನೆ