ನವದೆಹಲಿ: ಸರ್ಕಾರಿ ಪ್ರಾಯೋಜಕತ್ವದ ದೂರದರ್ಶನ ಹೊಸ ರೂಪಕ್ಕೆ ಬದಲಾಗಿದೆ. ಅದರ ಲೋಗೋದಲ್ಲಿದ್ದ ಕೆಂಪು ಬಣ್ಣದ ಜಾಗದಲ್ಲಿ ಕೇಸರಿ ಕಲರ್ ಬಂದಿದೆ. ಈ ಬಗ್ಗೆ ವಾಹಿನಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿತ್ತು.
ರಾಷ್ಟ್ರೀಯ ಪ್ರಸಾರಕವಾದ ದೂರದರ್ಶನವು ತನ್ನ ಐತಿಹಾಸಿಕ ಲೋಗೋದ ಬಣ್ಣದ ಬದಲಾವಣೆಯ ಜೊತೆಗೆ ಕಂಗೊಳಿಸುತ್ತಿದೆ. "ಹಿಂದಿನ ಮೌಲ್ಯಗಳು ಮತ್ತು ನಿಖರತೆಯೊಂದಿಗೆ, ನಾವು ಈಗ ಹೊಸ ಅವತಾರದಲ್ಲಿ ಲಭ್ಯವಿದ್ದೇವೆ. ಹೊಸ ಸುದ್ದಿ ಪ್ರಯಾಣಕ್ಕೆ ಸಿದ್ಧರಾಗಿ, ಹೊಸ ರೂಪದ ಡಿಡಿ ನ್ಯೂಸ್ ಅನ್ನು ಆನಂದಿಸಿ" ಎಂದು ವಿಡಿಯೋ ಸಮೇತ ಡಿಡಿ ನ್ಯೂಸ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಕೇಸರಿ ಬಣ್ಣಕ್ಕೆ ಆಕ್ಷೇಪ: 6 ರಾಷ್ಟ್ರೀಯ ಮತ್ತು 17 ಪ್ರಾದೇಶಿಕ ವಾಹಿನಿಗಳಲ್ಲಿ ಪ್ರಸಾರವಾಗುವ ದೂರದರ್ಶದ ಲೋಗೋವು ಹೊಸ ಬಣ್ಣಕ್ಕೆ ಬದಲಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಅದರಲ್ಲೂ ಕೇಸರಿ ಬಣ್ಣವೇ ಏಕೆ ಎಂದು ಪ್ರಶ್ನಿಸಲಾಗಿದೆ. ರಾಜ್ಯಸಭಾ ಸದಸ್ಯ ಮತ್ತು ಪ್ರಸಾರ ಭಾರತಿಯ (ಡಿಡಿ, ಎಐಆರ್) ಮಾಜಿ ಸಿಇಒ ಜವಾಹರ್ ಸಿರ್ಕಾರ್ ಅವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ಮಾಧ್ಯಮ "ಕೇಸರಿಕರಣ"ದತ್ತ ಸಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ದೂರದರ್ಶನವು ತನ್ನ ಐತಿಹಾಸಿಕ ಲೋಗೋವನ್ನು ಕೇಸರಿ ಬಣ್ಣದಲ್ಲಿ ಬದಲಿಸಿದೆ. ಅದರ ಮಾಜಿ ಸಿಇಒ ಆಗಿರುವ ಈ ಬಗ್ಗೆ ಆಕ್ಷೇಪ ಹೊಂದಿದ್ದೇನೆ. ಇದು ಕೇಸರಿಕರಣದ ಎಚ್ಚರಿಕೆಯಾಗಿದೆ ಎಂದು ಭಾವಿಸುತ್ತೇನೆ. ಇದು ಪ್ರಸಾರ ಭಾರತಿ ಅಲ್ಲ -- ಪ್ರಚಾರ ಭಾರತಿ ಎಂದು ವ್ಯಂಗ್ಯವಾಡಿದ್ದಾರೆ.
ಹಿಂದಿನ ಯುಪಿಎ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದ, ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಅವರು, ಲೋಗೋದ ಬಣ್ಣ ಬದಲಾವಣೆಯು ಸರ್ಕಾರಿ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವ ಸರ್ಕಾರದ ಪ್ರಯತ್ನ ಇದಾಗಿದೆ. ಇದು ಸಾರ್ವಜನಿಕ ಪ್ರಸಾರ ಸಂಸ್ಥೆಯ ತಟಸ್ಥತೆ ಮತ್ತು ವಿಶ್ವಾಸಾರ್ಹತೆಯನ್ನು ಸ್ಪಷ್ಟವಾಗಿ ಹಾಳುಗೆಡುವುವ ತಂತ್ರ ಎಂದಿದ್ದಾರೆ.
ಬಿಜೆಪಿ ತಿರುಗೇಟು: ಕೇಸರಿ ಬಣ್ಣಕ್ಕೆ ಲೋಗೋ ಬದಲಾವಣೆ ಮಾಡಿದ್ದನ್ನು ಟೀಕಿಸುತ್ತಿರುವ ವಿಪಕ್ಷಗಳಿಗೆ ಬಿಜೆಪಿ ತಿರುಗೇಟು ನೀಡಿದೆ. 1959 ರಲ್ಲಿ ದೂರದರ್ಶನ ಪ್ರಾರಂಭಿಸಿದಾಗ ಕೇಸರಿ ಲೋಗೋ ಇತ್ತು. ಈಗ ಸರ್ಕಾರವು ಮೂಲ ಲೋಗೋವನ್ನು ಮರು ಪರಿಚಯಿಸಿದೆ. ಸುಖಾಸುಮ್ಮನೆ ಕೇಸರಿ ಬಣ್ಣದ ವಿರುದ್ಧ ಟೀಕೆ, ಆರೋಪ ಮಾಡಲಾಗುತ್ತಿದೆ ಎಂದಿದೆ.
ಇನ್ನು, ದೂರದರ್ಶನದ ನಡೆಯನ್ನು ಸಮರ್ಥಿಸಿಕೊಂಡ ಪ್ರಸಾರ ಭಾರತಿ ಸಿಇಒ ಗೌರವ್ ದ್ವಿವೇದಿ, ಹೊಸ ಲೋಗೋ ಆಕರ್ಷಕ 'ಕಿತ್ತಳೆ' ಬಣ್ಣದಲ್ಲಿ ಮಿಂಚುತ್ತಿದೆ. ಇದು ದೃಶ್ಯ ಸೌಂದರ್ಯದ ಬದಲಾವಣೆಯಾಗಿದೆ. ಈ ಬಣ್ಣ ಕಿತ್ತಳೆ, ಕೇಸರಿ ಅಲ್ಲ ಎಂದು ಹೇಳಿದ್ದಾರೆ. ಕೇವಲ ಲೋಗೋವನ್ನು ಮಾತ್ರ ಬದಲಾಯಿಸಿಲ್ಲ. ಜನರು ವಾಹಿನಿಯನ್ನು ವೀಕ್ಷಿಸುವ ಮತ್ತು ಭಾವನೆಯನ್ನು ಮೇಲ್ಪಂಕ್ತಿಗೆ ಏರಿಸಲಾಗಿದೆ. ಆದರೆ, ಬಣ್ಣ ಬದಲಾವಣೆಗೆ ಟೀಕೆ ಕೇಳಿ ಬರುತ್ತಿರುವುದು ದುರದೃಷ್ಟಕರ ಸಂಗತಿ ಎಂದಿದ್ದಾರೆ.
ದೂರದರ್ಶನದ ಇತಿಹಾಸ: ದೂರದರ್ಶನವು ಮೊದಲ ಬಾರಿಗೆ ಸೆಪ್ಟೆಂಬರ್ 15, 1959 ರಂದು ಸಾರ್ವಜನಿಕ ಸೇವಾ ಪ್ರಸಾರಕವಾಗಿ ಕಾರ್ಯಾರಂಭ ಮಾಡಿತು. 1965 ರಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಬೆಳಿಗ್ಗೆ ಮತ್ತು ಸಂಜೆ ದೈನಂದಿನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿತ್ತು. 1975 ರ ವೇಳೆಗೆ ಮುಂಬೈ, ಪಂಜಾಬ್ನ ಅಮೃತಸರ ಮತ್ತು ಇತರ ನಗರಗಳಿಗೆ ಸೇವೆಯನ್ನು ವಿಸ್ತರಿಸಲಾಯಿತು.
1976ರಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ದೂರದರ್ಶನವನ್ನು ಸೇರಿಸಿಕೊಳ್ಳಲಾಯಿತು. 1982 ರಲ್ಲಿ ದೂರದರ್ಶನವು ರಾಷ್ಟ್ರೀಯ ವಾಹಿನಿಯಾಗಿ ಮೇಲ್ದರ್ಜೆಗೇರಿತು. 1984 ರಲ್ಲಿ ಡಿಡಿ ನೆಟ್‌ವರ್ಕ್ ಅಡಿಯಲ್ಲಿ ಹಲವು ಚಾನಲ್‌ಗಳಲ್ಲಿ ಪ್ರಸಾರವಾಯಿತು. ಸದ್ಯ 6 ರಾಷ್ಟ್ರೀಯ ಮತ್ತು 17 ಪ್ರಾದೇಶಿಕ ಚಾನಲ್‌ಗಳನ್ನು ಹೊಂದಿದೆ. ದೂರದರ್ಶನವು ತನ್ನ ಲೋಗೋದ ಬಣ್ಣವನ್ನು ನೀಲಿ, ಹಳದಿ ಮತ್ತು ಕೆಂಪು ಬಣ್ಣಕ್ಕೆ ಬದಲಿಸಿಕೊಂಡಿದೆ. ಲೋಗೋದ ಸುತ್ತಲಿನ ಚಿಹ್ನೆ ಮತ್ತು ಗೋಳದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.