ತಿರುಚ್ಚಿ (ತಮಿಳುನಾಡು): ತಮಿಳುನಾಡಿನ ತಿರುಚ್ಚಿಯ ಗ್ರಾಮವೊಂದರ 389 ಎಕರೆ ಜಾಗವನ್ನು ವಕ್ಫ್ ಮಂಡಳಿ ತನ್ನದೆಂದು ಘೋಷಿಸಿಕೊಂಡಿದೆ. ಹೀಗಾಗಿ ಅಲ್ಲಿನ ಜನರು ತಮ್ಮ ಸ್ವಂತ ಜಮೀನು, ಸ್ಥಳವನ್ನು ಮಾರಾಟ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಪರಭಾರೆಗೂ ಮೊದಲು ವಕ್ಫ್ ಮಂಡಳಿಯ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕಿದೆ.
ಹೌದು. ಇಂಥದ್ದೊಂದು ವಿಚಿತ್ರ ಸಂಗತಿಯನ್ನು ಕೇಂದ್ರ ಸರ್ಕಾರವೇ ಬಯಲು ಮಾಡಿದೆ. ಆಗಸ್ಟ್ 8 ರಂದು ಲೋಕಸಭೆಯಲ್ಲಿ ವಕ್ಫ್ ಮಂಡಳಿ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ ವೇಳೆ ಈ ವಿಚಾರ ಬಯಲಾಗಿದೆ. ಮಂಡಳಿಯ ದೌರ್ಜನ್ಯದಿಂದ ಅಲ್ಲಿನ ಜನರು ತಮ್ಮ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಕ್ಫ್ ತಿದ್ದುಪಡಿ ವಿಧೇಯಕದ ಮೇಲೆ ಮಾತನಾಡಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ತಮಿಳುನಾಡಿನ ತಿರುಚ್ಚಿಯ ತಿರುಚೆಂತುರೈ ಎಂಬ ಗ್ರಾಮದಲ್ಲಿ ವಕ್ಫ್ ಬೋರ್ಡ್ 389 ಎಕರೆ ಜಾಗವನ್ನು ತನ್ನದೆಂದು ಘೋಷಿಸಿಕೊಂಡಿದೆ. 2022 ರಿಂದ ಈ ವಿವಾದ ಸೃಷ್ಟಿಯಾಗಿದೆ. ಇಡೀ ಊರಿನ ಆಸ್ತಿಯನ್ನೇ ವಕ್ಫ್ ತನಗೆ ಸೇರಿದ್ದು ಎಂದು ವಾದಿಸುತ್ತಿದೆ. ಅಲ್ಲಿನ ಜನರು ತಮ್ಮ ಜಮೀನನ್ನು ಸಹ ಕ್ರಯ ಮಾಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಇಂತಹ ದೌರ್ಜನ್ಯಕ್ಕೆ ತಡೆ ಹಾಕಬೇಕಿದೆ ಎಂದು ತಿಳಿಸಿದ್ದರು.
ಈಟಿವಿ ಭಾರತ್ನಿಂದ ಸತ್ಯಾನ್ವೇಷಣೆ: ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲು 'ಈಟಿವಿ ಭಾರತ್' ಕ್ಷೇತ್ರ ಸಮೀಕ್ಷೆ ನಡೆಸಿತು. ಈ ವೇಳೆ ಹಲವು ಸಂಗತಿಗಳ ಕರಾಳ ಸತ್ಯ ಹೊರಬಿದ್ದಿದೆ. 2022 ರಲ್ಲಿ ಗ್ರಾಮದ ವ್ಯಕ್ತಿಯೊಬ್ಬರು ಮಗಳ ಮದುವೆಗಾಗಿ ತಮ್ಮ ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದರು. ನೋಂದಣಿ ಕಚೇರಿಗೆ ಹೋದಾಗ ಚೆನ್ನೈನಲ್ಲಿರುವ ತಮಿಳುನಾಡು ವಕ್ಫ್ ಬೋರ್ಡ್ ಕಚೇರಿಯಿಂದ ‘ನಿರಾಕ್ಷೇಪಣಾ ಪ್ರಮಾಣಪತ್ರ’ ತರಲು ಸೂಚಿಸಿದ್ದರು. ಇದರ ವಿರುದ್ಧ ಇಡೀ ಗ್ರಾಮವೇ ಪ್ರತಿಭಟನೆ ನಡೆಸಿತ್ತು.
ತಿರುಚೆಂತುರೈ ಗ್ರಾಮದಲ್ಲಿ ವೈದ್ಯರಾಗಿರುವ ರಾಜಾ ಎಂಬುವರು ಮಾತನಾಡಿ, "ಒಟ್ಟು 389 ಎಕರೆ ಭೂಮಿಯನ್ನು ವಕ್ಫ್ ಮಂಡಳಿ ತನ್ನದೆಂದು ಹೇಳುತ್ತಿದೆ. ಇದಕ್ಕೆ ಮಂಡಳಿ ಬಳಿ ಯಾವುದೇ ಪುರಾವೆ ಇಲ್ಲ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ವಕ್ಫ್ ಬೋರ್ಡ್‌ಗೆ ಈ ಜಮೀನು ಸೇರುವುದಿಲ್ಲ. ಗ್ರಾಮದ ನಿವಾಸಿಗಳಿಗೆ ಆಸ್ತಿಯ ಮೇಲೆ ಪೂರ್ಣ ಹಕ್ಕಿದೆ ಎಂದು ಹೇಳಿತ್ತು. ಆದರೆ, ವಕ್ಫ್ ಬೋರ್ಡ್ನ ತಕರಾರಿನಿಂದಾಗಿ ಇಲ್ಲಿನ ಜಮೀನನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಸ್ವತಃ ಆಸ್ತಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಆಸ್ತಿ ವಶಕ್ಕೆ ಕೋರಿದ್ದ ವಕ್ಫ್ ಮಂಡಳಿ: ಗ್ರಾಮದ 389 ಎಕರೆ ಜಮೀನು ವಶಕ್ಕೆ ವಕ್ಫ್ ಮಂಡಳಿ ಸಬ್ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಸಲ್ಲಿಸಿತ್ತು. ಇದರ ವಿರುದ್ಧ ಗ್ರಾಮಸ್ಥರಿಂದ ಸರಣಿ ಪ್ರತಿಭಟನೆ ನಡೆಸಲಾಗಿತ್ತು. ಬಳಿಕ ಅಲ್ಲಿನ ಜಿಲ್ಲಾಡಳಿತ ವಕ್ಫ್ ಮಂಡಳಿ ಅರ್ಜಿಯನ್ನು ತಿರಸ್ಕರಿಸಿತ್ತು. ಮಂಡಳಿ ಮತ್ತು ಗ್ರಾಮಸ್ಥರ ನಡುವೆ ಶಾಂತಿ ಸಂಧಾನ ನಡೆಸಿ, ಆಸ್ತಿಯ ಮೇಲಿನ ಹಕ್ಕು ಜನರಿಗೆ ಸೇರಿದ್ದು ಎಂದು ಸರ್ಕಾರ ಹೇಳಿದೆ. ಆದರೆ, ವಕ್ಫ್ ಮಂಡಳಿಯ ತಗಾದೆಯಿಂದ ಇಲ್ಲಿನ ಜನರಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲವಾಗಿದೆ.
ಇದನ್ನೂ ಓದಿ: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ವಿಧೇಯಕ ಮಂಡನೆ: ಪ್ರತಿಪಕ್ಷಗಳ ವಿರೋಧ, ಸಂಸದೀಯ ಮಂಡಳಿಗೆ ಶಿಫಾರಸು - Waqf Bill