ಗ್ಯಾಂಗ್ಟಕ್(ಸಿಕ್ಕಿಂ): ಇಲ್ಲಿನ ಎಸ್‌ಟಿಎನ್ಎಂ ಆಸ್ಪತ್ರೆಯ ವೈದ್ಯರು ಕಳೆದ 12 ವರ್ಷಗಳಿಂದ ಮಹಿಳೆಯ ಹೊಟ್ಟೆಯಲ್ಲಿದ್ದ ಶಸ್ತ್ರಚಿಕಿತ್ಸೆಗೆ ಬಳಸುವ ಕತ್ತರಿ (Surgical Scissor) ಹೊರತೆಗೆದಿದ್ದಾರೆ. ಈ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.
ಇದೇ ಆಸ್ಪತ್ರೆಯಲ್ಲಿ ಮಹಿಳೆ ಹನ್ನೆರಡು ವರ್ಷಗಳ ಹಿಂದೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ವೈದ್ಯರು ಅಚಾತುರ್ಯದಿಂದ ಕತ್ತರಿಯನ್ನು ಹೊಟ್ಟೆಯಲ್ಲೇ ಬಿಟ್ಟಿದ್ದಾರೆ ಎಂದು ಅವರು ಹೇಳಿದರು.
"ಮಹಿಳೆಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡುವಾಗ ಆಕೆಯ ಹೊಟ್ಟೆಯಲ್ಲೇ ಕತ್ತರಿ ಬಿಟ್ಟಿರುವ ಕುರಿತ ಘಟನೆಯ ಬಗ್ಗೆ ತನಿಖೆ ನಡೆಸಲು ನಮ್ಮ ಆಸ್ಪತ್ರೆಯ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ವಿಶೇಷ ಸಮಿತಿ ರಚಿಸಲಾಗಿದೆ" ಎಂದು ಎಸ್‌ಟಿಎನ್ಎಂ ಆಸ್ಪತ್ರೆಯ ವಕ್ತಾರ ಡಾ.ಸುರೇಶ್ ಮದನ್ ರೈ ತಿಳಿಸಿದ್ದಾರೆ.
"ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಯ ಬಳಿಕವೂ ಮಹಿಳೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕುಟುಂಬಸ್ಥರು ಅವರನ್ನು ಎಸ್‌ಟಿಎನ್ಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಕ್ಸ್‌ರೇ ನಡೆಸಿದಾಗ ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸೆಗೆ ಬಳಸುವ ಕತ್ತರಿ ಕಾಣಿಸಿದೆ. ಗುರುವಾರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಕತ್ತರಿಯನ್ನು ಹೊರತೆಗೆದಿದ್ದಾರೆ" ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಮಹಿಳೆಯ ಹೊಟ್ಟೆಯಲ್ಲಿತ್ತು 3 ಕೆ.ಜಿ ತೂಕದ ಕೂದಲು: ಆಕೆಗಿತ್ತು ಕೇಶ ತಿನ್ನುವ ಕೆಟ್ಟ ಅಭ್ಯಾಸ!