ಕಣ್ಣೂರು: ಕಣ್ಣೂರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನವೀನ್ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಸಿಪಿಐ(ಎಂ) ನಾಯಕಿ ಪಿ.ಪಿ.ದಿವ್ಯಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಿವ್ಯಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳದ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದ ಕೆಲವೇ ಗಂಟೆಗಳ ನಂತರ ಅವರನ್ನು ಬಂಧಿಸಲಾಗಿದೆ. ತಲಶ್ಶೇರಿ ನ್ಯಾಯಾಲಯ ಏಕಸದಸ್ಯ ಪೀಠವು ದಿವ್ಯಾರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಬಾಬು ಅವರನ್ನುದ್ದೇಶಿಸಿ ಮಾತನಾಡಿದ್ದ ದಿವ್ಯಾರಿಗೆ ಯಾವುದೇ ದುರುದ್ದೇಶವಿರಲಿಲ್ಲ ಹಾಗೂ ಅವರು ಭ್ರಷ್ಟಾಚಾರದ ಕುರಿತಾಗಿ ಸಾಮಾನ್ಯವಾಗಿ ಮಾತನಾಡಿದ್ದರು ಎಂದು ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯ ಸಮಯದಲ್ಲಿ ದಿವ್ಯಾ ಅವರ ವಕೀಲರು ವಾದಿಸಿದರು.
ಜಾಮೀನು ಅರ್ಜಿಯನ್ನು ಪ್ರಾಸಿಕ್ಯೂಷನ್ ವಿರೋಧಿಸಿತ್ತು. ಈ ಪ್ರಕರಣದಲ್ಲಿ ಏಕೈಕ ಆರೋಪಿಯಾಗಿರುವ ದಿವ್ಯಾ ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಲೆಮರೆಸಿಕೊಂಡಿದ್ದರು. ಏತನ್ಮಧ್ಯೆ ದಿವ್ಯಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಣ್ಣೂರು ಪೊಲೀಸ್ ಆಯುಕ್ತ ಅಜಿತ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಣ್ಣೂರು ಆಡಳಿತಾರೂಢ ಸಿಪಿಐ-ಎಂನ ಭದ್ರಕೋಟೆಯಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯ ಪಕ್ಷದ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರು ಇದೇ ಜಿಲ್ಲೆಯವರಾಗಿದ್ದಾರೆ.
ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದಿವ್ಯಾ ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದರಿಂದ ರಾಜ್ಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಕಣ್ಣೂರಿನ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ದಿವ್ಯಾ ಅವರನ್ನು ಪ್ರಶ್ನಿಸಲಾಗುತ್ತಿದ್ದು, ನಂತರ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಬು ಅಕ್ಟೋಬರ್ 15 ರಂದು ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಕ್ಟೋಬರ್ 17 ರಂದು ದಿವ್ಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಅವರು ನಾಪತ್ತೆಯಾಗಿದ್ದರು.
ಅಕ್ಟೋಬರ್ 14 ರಂದು ಬಾಬು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದರು. ಆ ಸಂದರ್ಭದಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಬಂದ ದಿವ್ಯಾ ಬಹಿರಂಗವಾಗಿ ಬಾಬು ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಅಲ್ಲಿಂದ ತೆರಳಿದ್ದರು. ಇದರಿಂದ ನೊಂದು ಬಾಬು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಂಗಳವಾರ ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ವೃತ್ತಿಯಲ್ಲಿ ವಕೀಲರಾಗಿರುವ ಬಾಬು ಅವರ ಸಹೋದರ, ದಿವ್ಯಾ ಅವರಿಗೆ ಬಂಧನ ಪೂರ್ವ ಜಾಮೀನು ನಿರಾಕರಿಸಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಇದನ್ನೂ ಓದಿ : 95 ಕೆ.ಜಿ ಮೆಥಾಂಫೆಟಮೈನ್ ಡ್ರಗ್ಸ್ ವಶ: ಮೆಕ್ಸಿಕೊ ಪ್ರಜೆ, ಜೈಲು ವಾರ್ಡನ್ ಬಂಧನ