ನವದೆಹಲಿ: ಭಾರತೀಯ ನೌಕಾಪಡೆಯ 26ನೇ ಮುಖ್ಯಸ್ಥರಾಗಿ (ಅಡ್ಮಿರಲ್) ದಿನೇಶ್ ಕುಮಾರ್ ತ್ರಿಪಾಠಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಹಾಲಿ ಅಡ್ಮಿರಲ್ ಆರ್.ಹರಿಕುಮಾರ್ ನಿವೃತ್ತಿ ಹೊಂದಿದ್ದಾರೆ.
ಅಧಿಕಾರ ವಹಿಸಿಕೊಳ್ಳುವ ಮುನ್ನ ತ್ರಿಪಾಠಿ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ತ್ರಿಪಾಠಿ ಅವರಿಗೆ ರೈಸಿನಾ ಹಿಲ್ಸ್‌ನಲ್ಲಿರುವ ಸೌತ್ ಬ್ಲಾಕ್‌ನ ಲಾನ್‌ನಲ್ಲಿ ಗೌರವ ವಂದನೆ ನೀಡಲಾಯಿತು. ಈ ಸಂದರ್ಭದಲ್ಲಿ ತಮ್ಮ ತಾಯಿ ರಜನಿ ತ್ರಿಪಾಠಿ ಅವರ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದ ಕ್ಷಣ ಹೃದಯಸ್ಪರ್ಶಿಯಾಗಿತ್ತು.
ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧ ಪರಿಣತರಾದ ತ್ರಿಪಾಠಿ, ಸದ್ಯ ನೌಕಾಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.
ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ''ಸಮುದ್ರದಲ್ಲಿ ಸಂಭಾವ್ಯ ಎದುರಾಳಿಗಳನ್ನು ತಡೆಯಲು ಭಾರತೀಯ ನೌಕಾಪಡೆಯು ಎಲ್ಲ ಸಮಯದಲ್ಲೂ ಕಾರ್ಯಾಚರಣೆಗೆ ಸಿದ್ಧವಾಗಿರಬೇಕು. ಹಲವು ವರ್ಷಗಳಿಂದ ನಮ್ಮ ನೌಕಾಪಡೆಯು ಯುದ್ಧ ಸಿದ್ಧತೆ, ಸುಸಂಘಟಿತ, ವಿಶ್ವಾಸಾರ್ಹ ಶಕ್ತಿಯಾಗಿ ವಿಕಸನಗೊಂಡಿದೆ'' ಎಂದು ತಿಳಿಸಿದರು.
ತ್ರಿಪಾಠಿ ಹಿನ್ನೆಲೆ: ಮಧ್ಯಪ್ರದೇಶದ ರೇವಾ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿಯಾದ ತ್ರಿಪಾಠಿ, 1964ರ ಮೇ 15ರಂದು ಜನಿಸಿದ್ದಾರೆ. 1985ರ ಜುಲೈ 1ರಂದು ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜಿಸಲ್ಪಟ್ಟಿದ್ದರು. ಸುಮಾರು 39 ವರ್ಷಗಳ ಸುದೀರ್ಘ ಸೇವಾ ಅನುಭವ ಹೊಂದಿದ್ದಾರೆ.
ಪಶ್ಚಿಮ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ನೌಕಾಪಡೆಯ ಹಡಗುಗಳಾದ ವಿನಾಶ್, ಕಿರ್ಚ್ ಮತ್ತು ತ್ರಿಶೂಲ್‌ಗೆ ಕಮಾಂಡರ್ ಆಗಿ ಕೆಲಸ ಮಾಡಿದ್ದಾರೆ. ಪಶ್ಚಿಮ ಫ್ಲೀಟ್‌ನ ಫ್ಲೀಟ್ ಆಪರೇಷನ್ ಆಫೀಸರ್, ನೌಕಾ ಕಾರ್ಯಾಚರಣೆಗಳ ನಿರ್ದೇಶಕ, ನೆಟ್‌ವರ್ಕ್ ಸೆಂಟ್ರಿಕ್ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ, ನೌಕಾ ಯೋಜನೆಗಳ ಪ್ರಧಾನ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಇವರು, ವಿವಿಧ ಪ್ರಮುಖ ಕಾರ್ಯಾಚರಣೆಗಳು ಮತ್ತು ಸಿಬ್ಬಂದಿ ನೇಮಕಾತಿಗಳ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡಿದ್ದರು. ರಿಯರ್ ಅಡ್ಮಿರಲ್ ಆಗಿ ಪೂರ್ವ ನೌಕಾಪಡೆಯ ಕಮಾಂಡಿಂಗ್ ಧ್ವಜ ಅಧಿಕಾರಿಯಾಗಿ, ಕೇರಳದ ಎಝಿಮಲದ ಪ್ರತಿಷ್ಠಿತ ಭಾರತೀಯ ನೌಕಾ ಅಕಾಡೆಮಿಯ ಕಮಾಂಡೆಂಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ತ್ರಿಪಾಠಿ, ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜು, ನೌಕಾ ಹೈಯರ್ ಕಮಾಂಡ್ ಕೋರ್ಸ್ ಮತ್ತು ಅಮೆರಿಕದ ನೌಕಾ ಕಮಾಂಡ್ ಕಾಲೇಜಿನಿಂದಲೂ ಕೋರ್ಸ್‌ಗಳನ್ನು ಪಡೆದಿದ್ದಾರೆ. ಅತಿ ವಿಶಿಷ್ಟ ಸೇವಾ ಪದಕ ಮತ್ತು ನೌಕಾ ಸೇನಾ ಪದಕಗಳಿಗೆ ತ್ರಿಪಾಠಿ ಭಾಜನರಾಗಿದ್ದಾರೆ.
ಇದನ್ನೂ ಓದಿ: ಐವಿಎಂಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಭಾರತ್ ಬಯೋಟೆಕ್ ಅಧ್ಯಕ್ಷ ಕೃಷ್ಣ ಎಲ್ಲಾ - Krishna Ella