ಗಯಾ: ಕಾಲಕ್ಕೆ ತಕ್ಕಂತೆ ಅಪರಾಧಗಳು ಸ್ವರೂಪ ಬದಲಾಗುತ್ತಿದೆ. ಇದೀಗ ದೇಶದೆಲ್ಲೆಡೆ 'ಡಿಜಿಟಲ್ ಅರೆಸ್ಟ್' ಎಂಬ ಸೈಬರ್ ವಂಚಕರ ಹೊಸ ಮೋಸದ ಜಾಲದ ಕುರಿತು ಸುದ್ದಿಯಾಗುತ್ತಿದ್ದು, ಜನರು ಈ ಬಗ್ಗೆ ಎಚ್ಚರವಹಿಸುವುದು ಅವಶ್ಯವಾಗಿದೆ. ಅಧಿಕಾರಿಗಳು ಎಂಬ ಸೋಗಿನಲ್ಲಿ ಕರೆ ಮಾಡುವ ವಂಚಕರು ಅಮಾಯಕರಿಂದ ಹಣ ದೋಚುತ್ತಿರುವ ಪ್ರಕರಣಗಳು ಎಲ್ಲೆಡೆ ವರದಿಯಾಗುತ್ತಿದೆ. ತಂತ್ರಜ್ಞಾನದ ಪ್ರಯೋಜನ ಪಡೆದುಕೊಂಡು ನಡೆಸುತ್ತಿರುವ ಈ ವಂಚನೆ ಜಾಲದಲ್ಲಿ ಸುಶಿಕ್ಷಿತರೇ ಬಲಿಪಶುಗಳಾಗುತ್ತಿದ್ದಾರೆ.
ಇದೀಗ ಅದೇ ರೀತಿಯ ಡಿಜಿಟಲ್ ಅರೆಸ್ಟ್ ಪ್ರಕರಣ ಬಿಹಾರದ ಗಯಾದಲ್ಲಿ ನಡೆದಿದ್ದು, ವೈದ್ಯರೊಬ್ಬರು 96 ಗಂಟೆಗಳ ಕಾಲ ಡಿಜಿಟಲ್ ಬಂಧನಕ್ಕೆ ಒಳಗಾಗುವ ಜೊತೆಗೆ ಬರೋಬ್ಬರಿ 4.4 ಕೋಟಿ ರೂ ಮೋಸಕ್ಕೆ ಒಳಗಾಗಿದ್ದಾರೆ.
ಏನಿದು ಘಟನೆ?: ಡಾ.ಎ ಎನ್ ರಾಯ್ ಎಂಬ ವೈದ್ಯರು ಇತ್ತೀಚಿಗೆ ವಿಡಿಯೋ ಕರೆಯೊಂದನ್ನು ಸ್ವೀಕರಿಸಿದ್ದಾರೆ. ಕರೆ ಮಾಡಿದವರು ತಮ್ಮನ್ನು ಸಿಬಿಐ ಅಧಿಕಾರಿಗಳ ರೀತಿ ಪ್ರತಿಬಿಂಬಿಸಿಕೊಂಡು, ನಂಬಿಸಿದ್ದಾರೆ. ಈ ವೇಳೆ ವೈದ್ಯರ ಬಳಿ ಅಪಾರ ಪ್ರಮಾಣದ ಸಂಪತ್ತು ಇದ್ದು, ನಿಮ್ಮ ಮೇಲೆ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ. ಅಲ್ಲದೇ, ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳದಂತೆ ಇರಲು ಲಂಚದ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವ ಭೀತಿಯಲ್ಲಿ ಹೆದರಿ ಸಿಬಿಐ ಅಧಿಕಾರಿಗಳು ಎಂಬಂತೆ ಬಿಂಬಿಸಿಕೊಂಡ ಅಧಿಕಾರಿಗಳ ನಿರ್ದೇಶನದಂತೆ 4 ದಿನದಲ್ಲಿ 4.40 ಕೋಟಿ ರೂ ಹಣ ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ಹಣ ವರ್ಗಾವಣೆ ಬಳಿಕ ತಾವು ಮೋಸಕ್ಕೆ ಒಳಗಾಗಿರುವುದಾಗಿ ತಿಳಿದ ವೈದ್ಯರು, ಇದೀಗ ಪೊಲೀಸರಿಗೆ ದೂರು ದಾಳಿಸಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗಿದೆ ಎಂದು ಗಯಾದ ಎಸ್ಎಸ್ಪಿ ಅಶೀಶ್ ಭಾರ್ತಿ ತಿಳಿಸಿದ್ದಾರೆ.
ಸದ್ಯ ಎನ್ಸಿಆರ್ಪಿ ಪೋರ್ಟಲ್ನಿಂದ 61 ಲಕ್ಷ ರೂವನ್ನು ಹಿಂಪಡೆಯಲಾಗಿದೆ. ಮುಂದಿನ ಕ್ರಮದ ಬಗ್ಗೆ ಪೊಲೀಸರು ನಿರತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಡಿಜಿಟಲ್ ಅರೆಸ್ಟ್ ಮೋಸದ ಜಾಲ ಅರಿಯಿರಿ: ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ವಂಚಿಸಲು ಸೈಬರ್ ವಂಚಕರು ಬಳಸುತ್ತಿರುವ ಮಾರ್ಗವನ್ನು ಡಿಜಿಟಲ್ ಅರೆಸ್ಟ್ ಎನ್ನಲಾಗುತ್ತದೆ. ಪೊಲೀಸ್, ಸಿಬಿಐ, ಇಡಿ ಮತ್ತಿತರ ತನಿಖಾ ಸಂಸ್ಥೆಗಳ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡುವ ವಂಚಕರು, "ನಿಮ್ಮ ಅಥವಾ ನಿಮ್ಮ ಆತ್ಮೀಯರ ಹೆಸರಿನಲ್ಲಿ ಬಂದಿರುವ ಅಥವಾ ನಿಮ್ಮ ಹೆಸರಿನಲ್ಲಿ ವಿದೇಶಕ್ಕೆ ಕಳಿಸಲಾಗುತ್ತಿರುವ ಪಾರ್ಸೆಲ್‌ನಲ್ಲಿ ಮಾದಕ ಪದಾರ್ಥ, ನಕಲಿ ಪಾಸ್‌ಪೋರ್ಟ್‌ಗಳು ಮತ್ತಿತರ ವಸ್ತುಗಳಿವೆ" ಎಂದು ಮೊದಲು ಬೆದರಿಸುತ್ತಾರೆ. ತನಿಖೆ ಮುಗಿಯುವವರೆಗೂ ವಿಡಿಯೋ ಕಾಲ್ ಕಟ್ ಮಾಡಲು ಅವಕಾಶವಿಲ್ಲ ಎನ್ನುತ್ತಾ ಹೆದರಿಸುತ್ತಾರೆ. ಹಣ ವರ್ಗಾವಣೆ ಆದ ಬಳಿಕ ಈ ಕರೆ ಬಂದ್ ಆಗುತ್ತದೆ.
ಇದನ್ನೂ ಓದಿ: ಸೈಬರ್ ಕಳ್ಳರ ಹೊಸ ತಂತ್ರ 'ಡಿಜಿಟಲ್ ಅರೆಸ್ಟ್'? ಅವಶ್ಯವಾಗಿ ತಿಳಿಯಿರಿ, ಅಪಾಯದಿಂದ ಪಾರಾಗಿ!