ವಿಜಯನಗರಂ, ಆಂಧ್ರಪ್ರದೇಶ: ವಿಜಯನಗರ ಜಿಲ್ಲೆಯ ಗುರ್ಲಾ ಎಂಬ ಹಳ್ಳಿಗಳಲ್ಲಿ ಕಳೆದ ಮೂರು ದಿನಗಳಿಂದ ವಿಪರೀತ ಅತಿಸಾರ(ಭೇದಿ)ದಿಂದ ಏಳು ಜನ ಮೃತಪಟ್ಟಿದ್ದಾರೆ.
ಇಂದು ಒಂದೇ ದಿನ ನಾಲ್ವರು ಮೃತಪಟ್ಟಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ತೊಂಡ್ರಂಗಿ ರಾಮಯ್ಯಮ್ಮ (60) ಮನೆಯಲ್ಲಿ ಮೃತಪಟ್ಟರೆ, ಸಾರಿಕಾ ಪೆಂಟಯ್ಯ (65) ಮತ್ತು ಕಾಳಿಶೆಟ್ಟಿ ಸೀತಮ್ಮ (45) ಚಿಕಿತ್ಸೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಪೈಡಮ್ಮ (50) ಎಂಬುವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಭೇದಿಯಿಂದ ಬಳಲುತ್ತಿದ್ದ 10 ಜನರನ್ನು ವಿಜಯನಗರ ಮತ್ತು ವಿಶಾಖಪಟ್ಟಣಂನ ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಿದೆ. ಕಳೆದ ಎರಡು ದಿನಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆ ರಾಜೇಶ್ವರಿ ಅವರಿಗೂ ಭೇದಿ ಕಾಣಿಸಿಕೊಂಡಿದೆ. ಪರಿಸ್ಥಿತಿ ಹತೋಟಿಗೆ ತರಲು ಅಧಿಕಾರಿಗಳು ಗ್ರಾಮದಲ್ಲಿ ವಿಶೇಷ ವೈದ್ಯಕೀಯ ಶಿಬಿರ ಏರ್ಪಡಿಸಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಈ ಪ್ರದೇಶಗಳಲ್ಲಿ ಅತಿಸಾರವನ್ನು ನಿಯಂತ್ರಣಕ್ಕೆ ತರಲು ಆರೋಗ್ಯ ತಂಡಗಳು ಪ್ರಯತ್ನಿಸುತ್ತಿವೆ
ಮಂಗಳವಾರ ಸಂಜೆ ವೇಳೆಗೆ ಅತಿಸಾರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಕೆಲವರು ಚೇತರಿಸಿಕೊಂಡಿದ್ದಾರೆ. ಆದರೆ, ಮೃತರೆಲ್ಲರಿಗೂ ಅತಿಸಾರ, ಬಿಪಿ, ಶುಗರ್, ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆ ಇರುವುದು ಕಂಡು ಬಂದಿದೆ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ.
ಗುರ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಶಾಸಕ ಕಿಮಿಡಿ ಕಲಾ ವೆಂಕಟರಾವ್ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. ಸರ್ಕಾರದ ವತಿಯಿಂದ ಎಲ್ಲ ರೀತಿಯ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ ಅವರು, ಗ್ರಾಮದಲ್ಲಿ ಸ್ವಚ್ಛತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಉಡುಪಿ: ಉಪ್ಪುಂದದಲ್ಲಿ 100ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ - Contaminated Water