ಮುಂಬೈ(ಮಹಾರಾಷ್ಟ್ರ): ದೇಶದ ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಜನರು ಬಿಜೆಪಿಗೆ ಕೈಕೊಟ್ಟಿದ್ದಾರೆ. ಇದು ಕಮಲ ಪಕ್ಷಕ್ಕೆ ಏಕಮೇವವಾಗಿ ಬಹುಮತ ಪಡೆಯಲು ಹಿನ್ನಡೆ ಉಂಟು ಮಾಡಿದೆ. ಇದು ಆಯಾ ರಾಜ್ಯದ ನಾಯಕರ ಸಾಮರ್ಥ್ಯದ ಮೇಲೂ ಪ್ರಶ್ನೆ ಮೂಡಿಸಿದೆ.
ಅದರಲ್ಲೂ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ದೊಡ್ಡ ನಷ್ಟವಾಗಿದೆ. ಇದರಿಂದ ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ತಮ್ಮ ಸ್ಥಾನ ತ್ಯಜಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಪಕ್ಷ ಹೆಚ್ಚಿನ ಸೀಟು ಗಳಿಸುವಲ್ಲಿ ವಿಫಲವಾದ ಕಾರಣ, ತಾವು ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ.
ಸರ್ಕಾರದಿಂದ ಹೊರಕ್ಕೆ: ಮುಂಬೈ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಿದ್ದರ ಪೂರ್ಣ ಹೊಣೆಯನ್ನು ನಾನೇ ಹೊರುವೆ. ಇದರಿಂದಾಗಿ ಪಕ್ಷ ಬಲವರ್ಧಿಸಲು ನಾನು ಸರ್ಕಾರದಿಂದ ಹೊರಗಿರುವೆ. ಡಿಸಿಎಂ ಸ್ಥಾನದಿಂದ ತಮ್ಮನ್ನು ಕೈಬಿಡುವಂತೆ ಹೈಕಮಾಂಡ್ಗೆ ಮನವಿ ಮಾಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಕೆಲವೆಡೆ ಭಾರೀ ಹಿನ್ನಡೆಯಾಗಿದೆ. ಈ ತಪ್ಪಿನ ಪೂರ್ಣ ಹೊಣೆಗಾರ ನಾನೇ. ಹೀಗಾಗಿ ಸರ್ಕಾರದ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸುವಂತೆ ಪಕ್ಷದ ವರಿಷ್ಠರನ್ನು ಕೋರುತ್ತೇನೆ. ಅವರನ್ನು ಶೀಘ್ರವೇ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದು ಅವರು ಹೇಳಿದರು.
ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಲು ಈಗಿನಿಂದಲೇ ಪಕ್ಷ ಬಲವರ್ಧನೆ ಮಾಡುವೆ. ಈ ಬಗ್ಗೆ ವರಿಷ್ಠರೊಂದಿಗೆ ಚರ್ಚೆ ನಡೆಸುವೆ ಮತ್ತು ಅವರ ಮಾರ್ಗದರ್ಶನದಂತೆ ಕೆಲಸ ಮಾಡುವುದಾಗಿ ಮಾಜಿ ಸಿಎಂ ಫಡ್ನವೀಸ್ ತಿಳಿಸಿದ್ದಾರೆ.
ಸರ್ಕಾರದಲ್ಲಿ ಸಮನ್ವಯ ಕೊರತೆ: ಬಿಜೆಪಿ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ಅಜಿತ್ ಪವಾರ್ ಜೊತೆಗೆ ಸಮನ್ವಯದ ಕೊರತೆ ಇರುವುದಾಗಿಯೂ ಒಪ್ಪಿಕೊಂಡ ಫಡ್ನವೀಸ್, ಸರ್ಕಾರದಲ್ಲಿ ಸಮನ್ವಯದ ಸಮಸ್ಯೆಗಳಿವೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಎನ್‌ಸಿಪಿಯ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಶೀಘ್ರವೇ ಸಭೆ ನಡೆಸಿ ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದರು.
ಲೋಕಸಭೆ ಚುನಾವಣಾ ಫಲಿತಾಂಶ ಮಂಗಳವಾರ (ಜೂನ್ 4) ಹೊರಬಿದ್ದಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ 48ರಲ್ಲಿ 9 ಸ್ಥಾನಗಳಲ್ಲಿ ಮಾತ್ರ ಗೆಲುವು ಪಡೆದಿದೆ. ಕಳೆದ ಬಾರಿ 23 ಕ್ಷೇತ್ರಗಳನ್ನು ಗೆದ್ದಿತ್ತು. 14 ಸ್ಥಾನಗಳ ಖೋತಾ ಉಂಟಾಗಿ ಭಾರೀ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ 13, ಶಿವಸೇನೆ (ಉದ್ಧವ್ ಬಣ) 9, ಎನ್ಸಿಪಿ (ಶರದ್ ಬಣ) 8, ಶಿವಸೇನೆ (ಶಿಂಧೆ ಬಣ) 7, ಎನ್ಸಿಪಿ (ಅಜಿತ್ ಬಣ) 1 ಸ್ಥಾನ ಗಳಿಸಿವೆ.
ಇದನ್ನೂ ಓದಿ: ಇಂಡಿಯಾ ಮೈತ್ರಿ ಕೂಟದ ಸಭೆಯಲ್ಲಿ ಭಾಗಿಯಾಗಲಿರುವ ಶರದ್ ಪವಾರ್, ಸುಪ್ರಿಯಾ ಸುಳೆ - INDIA Bloc meeting