ನವದೆಹಲಿ: ಎಲ್ಲ ಅಪರಾಧ ಪ್ರಕರಣಗಳಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಾಲಯವು ಈ ಪಿಐಎಲ್ ತಿರಸ್ಕರಿಸಿದ್ದು, ಮಾತ್ರವಲ್ಲದೇ ಅರ್ಜಿದಾರರಿಗೆ 75 ಸಾವಿರ ರೂ. ದಂಡವನ್ನು ಕೂಡಾ ವಿಧಿಸಿದೆ.
ಎಲ್ಲ ಕ್ರಿಮಿನಲ್ ಪ್ರಕರಣಗಳಲ್ಲಿ ದೆಹಲಿ ಮುಖ್ಯಮಂತ್ರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಒತ್ತಾಯಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಕೇಜ್ರಿವಾಲ್ ಮುಖ್ಯಮಂತ್ರಿ ಆಗುವವರೆಗೆ ಅಥವಾ ವಿಚಾರಣೆ ಪೂರ್ಣಗೊಳ್ಳದಿರುವವರೆಗೆ, ಅವರಿಗೆ ಎಲ್ಲಾ ಪ್ರಕರಣಗಳಲ್ಲಿ ಮಧ್ಯಂತರ ಜಾಮೀನು ನೀಡಬೇಕು ಎಂದು ಪಿಐಎಲ್‌ನಲ್ಲಿ ಮನವಿ ಮಾಡಲಾಗಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಮದ್ಯದ ಹಗರಣಕ್ಕೆ ಸಂಬಂಧಿಸಿದಂತೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂಬುದು ಗಮನಾರ್ಹ.
ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ಪೀಠ, 'ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯವು ಅಸಾಧಾರಣ ಮಧ್ಯಂತರ ಜಾಮೀನು ನೀಡಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶದ ಮೇರೆಗೆ ಯಾರೋ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಸಂಬಂಧದ ವಿಚಾರಣೆ ಇನ್ನೂ ಬಾಕಿ ಇದೆ. ಅವರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂದು ಪೀಠ ಇದೇ ವೇಳೆ ಹೇಳಿತು.
ಜನರ ರಕ್ಷಕ ಎಂಬ ಅರ್ಜಿದಾರರ ಹೇಳಿಕೆಗೆ ಯಾವುದೇ ಆಧಾರವಿಲ್ಲ. ಅರವಿಂದ್ ಕೇಜ್ರಿವಾಲ್ ಪರವಾಗಿ ಯಾವುದೇ ವೈಯಕ್ತಿಕ ಬಾಂಡ್ ಸಲ್ಲಿಸಲು ಅರ್ಜಿದಾರರಿಗೆ ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಾಲಯ ಕಂಡು ಕೊಂಡಿತು. ಈ ಹಿಂದೆ ಸಲ್ಲಿಸಲಾಗಿದ್ದ ಇದೇ ರೀತಿಯ ಅರ್ಜಿಗಳನ್ನೂ ವಜಾಗೊಳಿಸಲಾಗಿದ್ದು, 50,000 ರೂಪಾಯಿ ದಂಡ ವಿಧಿಸಲಾಗಿತ್ತು ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರು "ವಿ ದಿ ಪೀಪಲ್ ಆಫ್ ಇಂಡಿಯಾ" ಎಂಬ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಚಾರ ಬೇಡ ಎಂಬ ಕಾರಣಕ್ಕೆ ತಮ್ಮ ಹೆಸರನ್ನು ಬಳಸುತ್ತಿಲ್ಲ ಎಂದು ಹೇಳಿದ್ದರು.
ಇನ್ನು ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಹುಲ್ ಮೆಹ್ರಾ ಕೂಡ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು ಮತ್ತು ಖಂಡಿಸಿದರು. ಅವರು ಇದನ್ನು ಪ್ರಚಾರದ ಗಿಮಿಕ್ ಎಂದು ಕರೆದರು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಸಿಎಂ ಕೇಜ್ರಿವಾಲ್ ಏಪ್ರಿಲ್ 1ರವರೆಗೆ ಇಡಿ ಬಂಧನದಲ್ಲಿದ್ದರು. ಇದಾದ ಬಳಿಕ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಸದ್ಯ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿದ್ದಾರೆ. ಅವರ ನ್ಯಾಯಾಂಗ ಬಂಧನ ಏಪ್ರಿಲ್ 23ಕ್ಕೆ ಕೊನೆಗೊಳ್ಳಲಿದೆ.
ಓದಿ: ಮದುವೆಗೆ ತೆರಳಿದ್ದ ಸಚಿವರ ಮೇಲೆ ಹಲ್ಲೆ: ಮೂಗಿಗೆ ಬ್ಯಾಂಡೇಜ್ ಹಾಕಿಕೊಂಡೇ ಧರಣಿ - Attack on Sanjay Nishad