ನವದೆಹಲಿ: ರಾಹುಲ್ ಗಾಂಧಿ ಅವರ ಪೌರತ್ವ ವಿಷಯದಲ್ಲಿ ನಿಲುವು ತಿಳಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ತನ್ನನ್ನು ಬ್ರಿಟಿಷ್ ಪ್ರಜೆ ಎಂದು ಘೋಷಿಸಿಕೊಂಡಿರುವ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಶುಕ್ರವಾರ ಕೇಂದ್ರಕ್ಕೆ ಈ ಸೂಚನೆ ನೀಡಿತು.
ಈ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ಪ್ರತಿಕ್ರಿಯೆ ಪಡೆಯುವಂತೆ ಕೇಂದ್ರ ಸರ್ಕಾರದ ಸ್ಥಾಯಿ ವಕೀಲರಿಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ವಿಭು ಬಖ್ರು ನೇತೃತ್ವದ ನ್ಯಾಯಪೀಠ ಸೂಚಿಸಿದೆ.
ಹಿಂದಿನ ಸ್ಥಾಯಿ ವಕೀಲರನ್ನು ಇತ್ತೀಚೆಗೆ ಹಿರಿಯ ವಕೀಲರಾಗಿ ನೇಮಿಸಲಾಗಿದ್ದು, ಈ ಪ್ರಕರಣವನ್ನು ಹೊಸ ವಕೀಲರಿಗೆ ನಿಯೋಜಿಸಬೇಕಾಗಿದೆ ಎಂದು ತಿಳಿಸಿದ ನಂತರ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರನ್ನೂ ಒಳಗೊಂಡ ನ್ಯಾಯಪೀಠವು ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಪಿಐಎಲ್ ಮೇಲಿನ ಮುಂದಿನ ವಿಚಾರಣೆಯನ್ನು ಜನವರಿ 13, 2025ರಂದು ಪಟ್ಟಿ ಮಾಡಿತು.
ಈ ಪ್ರಕರಣದಲ್ಲಿ ಪ್ರತಿವಾದಿಗಳಿಗೆ ಔಪಚಾರಿಕ ನೋಟಿಸ್ ನೀಡಲು ನಿರಾಕರಿಸಿದ ಎಸಿಜೆ ಬಖ್ರು ನೇತೃತ್ವದ ನ್ಯಾಯಪೀಠವು, ಈ ವಿಷಯದಲ್ಲಿ ಪ್ರತಿಕ್ರಿಯೆ ಪಡೆಯುವಂತೆ ಕೇಂದ್ರ ಸರ್ಕಾರದ ಸ್ಥಾಯಿ ವಕೀಲರಿಗೆ ಸೂಚಿಸಿತು. ಹಿಂದಿನ ವಿಚಾರಣೆಯಲ್ಲಿ ಇದೇ ರೀತಿಯ ವಿಷಯವನ್ನು ಒಳಗೊಂಡಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್ ಹೊರಡಿಸಿದ ಆದೇಶದ ಪ್ರತಿಯನ್ನು ದಾಖಲಿಸುವಂತೆ ದೆಹಲಿ ಹೈಕೋರ್ಟ್ ಸ್ವಾಮಿ ಪರ ವಕೀಲರಿಗೆ ಸೂಚಿಸಿತ್ತು. ನ್ಯಾಯದ ಹಿತದೃಷ್ಟಿಯಿಂದ ಒಂದೇ ವಿಷಯವನ್ನು ಏಕಕಾಲದಲ್ಲಿ ಎರಡು ವಿಭಿನ್ನ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಕೂಡದು ಎಂದು ಅದು ಹೇಳಿದೆ.
ರಾಹುಲ್ ಗಾಂಧಿ ವಿರುದ್ಧ ತಾವು ಸಲ್ಲಿಸಿದ ದೂರು/ಅರ್ಜಿಯ ಬಗೆಗಿನ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಸ್ವಾಮಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. 2019ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು, ರಾಹುಲ್ ಗಾಂಧಿ ಯುಕೆ ಸರ್ಕಾರಕ್ಕೆ ಸ್ವತಃ ತಿಳಿಸಿರುವಂತೆ ಅವರು ಬ್ರಿಟಿಷ್ ಪ್ರಜೆಯಾಗಿದ್ದಾರೆ ಮತ್ತು ಬ್ರಿಟಿಷ್ ಪಾಸ್ ಪೋರ್ಟ್ ಹೊಂದಿದ್ದಾರೆ ಎಂದು ತಿಳಿಸಿದ್ದರು.
ಈ ರೀತಿಯಾಗಿ ಘೋಷಿಸಿದ ನಂತರ ಸಂವಿಧಾನದ 9ನೇ ವಿಧಿ ಮತ್ತು ಭಾರತೀಯ ಪೌರತ್ವ ಕಾಯ್ದೆ, 1955ರ ಪ್ರಕಾರ ರಾಹುಲ್ ಗಾಂಧಿ ಭಾರತೀಯ ಪ್ರಜೆಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಸ್ವಾಮಿ ವಾದಿಸಿದ್ದಾರೆ.
ಇದನ್ನೂ ಓದಿ: ಚಿಲಿ ದೇಶದ ಮಾಜಿ ಅಧ್ಯಕ್ಷೆ ಮಿಶೆಲ್ ಬಚೆಲೆಟ್ಗೆ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ