ಛಿಂದ್ವಾರಾ(ಮಧ್ಯಪ್ರದೇಶ): ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆಯಾಗುವ ತರಕಾರಿ ಬೆಲೆಯಿಂದ ಜನಸಾಮಾನ್ಯರು ತತ್ತರಿಸಬಹುದು. ಆದರೆ ಅದೇ ತರಕಾರಿ ಕೃಷಿಕನ ಬದುಕನ್ನೂ ಬದಲಿಸಬಲ್ಲದು. ಇದಕ್ಕೆ ಲೇಟೆಸ್ಟ್ ಉದಾಹರಣೆ ಬೆಳ್ಳುಳ್ಳಿ. ಹೌದು. ಬೆಳ್ಳುಳ್ಳಿಗೆ ಸದ್ಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದೆ. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಬಾಮಹನವಾಡ ಎಂಬಲ್ಲಿನ ಯುವ ರೈತ ಶಿವರಾಮ್ ವರ್ಮಾ ಎಂಬವರು ಸಾಲ ಮಾಡಿ ಬೆಳ್ಳುಳ್ಳಿ ಬೆಳೆದಿದ್ದರು. ಇದೀಗ ಸುಮಾರು ಮೂರು ತಿಂಗಳಲ್ಲೇ ಅವರು ಕೋಟ್ಯಧೀಶರಾಗಿದ್ದಾರೆ.
ಸಂಪೂರ್ಣ ವಿವರ: ಕೃಷಿಯಲ್ಲಿ ಏರಿಳಿತ ಕಾಣುವ ಬೆಲೆಯ ಬಗ್ಗೆ ರೈತರು ಸದಾ ಚಿಂತಿತರಾಗಿರುತ್ತಾರೆ. ಕೆಲವೊಮ್ಮೆ ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯಬಹುದು. ಅನೇಕ ಸಂದರ್ಭಗಳಲ್ಲಿ ಇದೇ ಬೆಲೆ ಪಾತಾಳಕ್ಕೂ ಇಳಿದು ರೈತರು ತೀವ್ರ ಸಂಕಷ್ಟ ಅನುಭವಿಸುವುದುಂಟು. ಶಿವರಾಮ್ ವರ್ಮಾ ತಮ್ಮ ಜಮೀನಿನಲ್ಲಿ ಬೆಳ್ಳುಳ್ಳಿ ಬೆಳೆಯಲು ನಿರ್ಧರಿಸಿದ್ದರು. ಆ ಸಂದರ್ಭದಲ್ಲಿ ಬೀಜಕ್ಕೆ ಕೆ.ಜಿಗೆ ಸುಮಾರು 300 ರೂ. ಇತ್ತು. ಇದರಿಂದಾಗಿ ನಾಟಿ ಕೆಲಸ ಕಷ್ಟವಾಗಿತ್ತು. ಆ ನಂತರ ರೈತ ಸಾಲ ಪಡೆದು ಬಿತ್ತನೆ ಬೀಜ, ಗೊಬ್ಬರ ಪಡೆದು ಕೃಷಿ ಮಾಡಿದ್ದರು. ಅವರ ಅದೃಷ್ಟಕ್ಕೆ ಬೆಳ್ಳುಳ್ಳಿಯ ಬೆಲೆ ನಿರೀಕ್ಷೆಗಿಂತಲೂ ಹೆಚ್ಚಾಗಿದೆ. ಹೀಗಾಗಿ ಕೇವಲ ಮೂರು ತಿಂಗಳಲ್ಲಿ ಸುಮಾರು 1.5 ಕೋಟಿ ರೂ ಮೌಲ್ಯದ ಬೆಳ್ಳುಳ್ಳಿಯನ್ನು ಅವರು ಪಡೆದಿದ್ದಾರೆ.
ಎಕರೆಗೆ 6ರಿಂದ 8 ಲಕ್ಷ ರೂ.ಲಾಭ: ಸದ್ಯ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆ.ಜಿಗೆ 500 ರೂ.ವರೆಗೂ ಇದೆ. ರೈತ ಶಿವರಾಮ್‌ಗೆ ಒಂದು ಎಕರೆಯಲ್ಲಿ ಸುಮಾರು 14ರಿಂದ 16 ಕ್ವಿಂಟಲ್ ಉತ್ಪನ್ನ ಸಿಕ್ಕಿದೆ. ಇದರಿಂದ ಎಕರೆಗೆ ಸುಮಾರು 8 ಲಕ್ಷ ರೂ ಲಾಭ ಕೈ ಸೇರಿದೆ. ಇವರು ಒಂದು ಎಕರೆಯಲ್ಲಿ ಸುಮಾರು 3 ಕ್ವಿಂಟಲ್ ಬೆಳ್ಳುಳ್ಳಿ ಬಿತ್ತಿದ್ದರು. ಗೊಬ್ಬರ ಸೇರಿದಂತೆ ಎಲ್ಲಾ ಖರ್ಚು ಸೇರಿ ಸುಮಾರು 1.5ರಿಂದ 2 ಲಕ್ಷ ರೂ.ವರೆಗೆ ವ್ಯಯಿಸಿದ್ದಾರೆ.
ಬೆಳೆ ಬೀಜಕ್ಕಿಂತ ದುಬಾರಿ: ರೈತರು ಹೊಲದಲ್ಲಿ ನಾಟಿ ಮಾಡಲು ಯಾವುದೇ ಬೀಜಗಳನ್ನು ಖರೀದಿಸಿದಾಗ ಅದರ ಬೆಲೆ ಹೆಚ್ಚಾಗಿರುತ್ತದೆ. ಫಸಲು ಬಂದಾಗ ಅದೇ ಬೆಲೆ ಕುಸಿಯುತ್ತದೆ. ಹೀಗಾಗಿ ಅನೇಕ ಬಾರಿ ರೈತರು ಬೀಜವನ್ನೇ ಎಸೆಯಬೇಕಾಗುತ್ತದೆ. ಆದರೆ ಅಪರೂಪಕ್ಕೆಂಬಂತೆ ಮೊದಲ ಬಾರಿಗೆ ಬೆಳ್ಳುಳ್ಳಿ ಬೀಜಕ್ಕೆ ಬೆಲೆ ಹೆಚ್ಚಾಗಿದೆ ಎಂದು ರೈತರು ಹೇಳುತ್ತಾರೆ. ಅಂದರೆ ಪ್ರತಿ ಕೆ.ಜಿಗೆ 300 ರೂ. ನೀಡಿ ಬೀಜ ಖರೀದಿಸಲಾಗಿತ್ತು. ಇದೀಗ ಮಾರುಕಟ್ಟೆಯಲ್ಲಿ ಕೆ.ಜಿಗೆ 500 ರೂ.ರಂತೆ ಬೆಳ್ಳುಳ್ಳಿ ಮಾರಾಟವಾಗುತ್ತಿದೆ.
ಈ ವಿಧಾನದಿಂದ ಬೆಳ್ಳುಳ್ಳಿ ಇಳುವರಿ ಹೆಚ್ಚು: ಸರ್ಕಾರಿ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಹಾಗೂ ಹಿರಿಯ ಕೃಷಿ ವಿಜ್ಞಾನಿ ಡಾ.ವಿಜಯ್ ಪರಾದಕರ ಮಾತನಾಡಿ, "ಇದೇ ಮೊದಲ ಬಾರಿಗೆ ಬೆಳ್ಳುಳ್ಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಉತ್ತಮ ತಂತ್ರಜ್ಞಾನದಿಂದ ಬೇಸಾಯ ಮಾಡಿದರೆ ಹೆಚ್ಚಿನ ಇಳುವರಿ ಪಡೆದು ರೈತರು ಲಾಭ ಗಳಿಸಬಹುದು. ಇದಕ್ಕಾಗಿ ಮೊದಲು ಮೂರು ಬಾರಿಯಾದರೂ ಗದ್ದೆ ಉಳುಮೆ ಮಾಡಿ ಸಾಕಷ್ಟು ಗೊಬ್ಬರ ಹಾಕಬೇಕು. ಒಂದು ಹೆಕ್ಟೇರ್ ಜಮೀನಿನಲ್ಲಿ 100 ಕೆ.ಜಿ ಸಾರಜನಕ, 50 ಕೆ.ಜಿ ರಂಜಕ, ಪೊಟ್ಯಾಷ್ ಮತ್ತು ಗಂಧಕವನ್ನು ಬಳಸಿ. ಆದರೆ 100 ಕೆ.ಜಿ ಸಾರಜನಕವನ್ನು ಒಮ್ಮೆಗೆ ಹಾಕಬಾರದು ಎಂಬುದನ್ನು ನೆನಪಿನಲ್ಲಿಡಬೇಕು. ಹೀಗೇ ಗೊಬ್ಬರವನ್ನು ಒಮ್ಮೆಲೆ ಹಾಕಿದರೆ ಬೆಳೆ ಹಾಳಾಗುತ್ತದೆ. ಆ ಸಮಯದಲ್ಲಿ 35 ಕೆ.ಜಿ ಬೆಳೆ ನೆಟ್ಟ 30 ದಿನಗಳ ನಂತರ, 35 ಮತ್ತು 45 ದಿನಗಳ ನಂತರ ಪ್ರತಿ ಹೆಕ್ಟೇರ್‌ಗೆ 30 ಕೆ.ಜಿ ರಸಗೊಬ್ಬರ ಹಾಕಬೇಕು ಮತ್ತು ಬೆಳೆಯಲ್ಲಿ ಸಾಲಿನಿಂದ ಸಾಲಿಗೆ 15 ಸೆಂಟಿಮೀಟರ್ ಮತ್ತು ಗಿಡದಿಂದ ಗಿಡಕ್ಕೆ 10 ಸೆಂ.ಮೀ ಅಂತರ ಇರಬೇಕು" ಎಂದು ಹೇಳಿದರು.
ಇದನ್ನೂ ಓದಿ: ರೈತನ ಕೈ ಹಿಡಿದ ಬೆಳ್ಳುಳ್ಳಿ: ಕ್ವಿಂಟಾಲ್ಗೆ ₹32,500ಯಂತೆ ಮಾರಾಟ