ನವದೆಹಲಿ: ಫೆಂಗಲ್ ಚಂಡಮಾರುತಕ್ಕೆ ತತ್ತರಿಸಿದ ತಮಿಳುನಾಡಿಗೆ ಕೇಂದ್ರ ಸರ್ಕಾರ 944.8 ಕೋಟಿ ನೆರವು ಘೋಷಿಸಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (ಎಸ್‌ಡಿಆರ್‌ಎಫ್) ಎರಡು ಕಂತುಗಳಲ್ಲಿ ಕೇಂದ್ರ ಈ ಪರಿಹಾರ ಬಿಡುಗಡೆ ಮಾಡಲು ಅನಮೋದನೆ ನೀಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಗದರ್ಶನ ಅಡಿಯಲ್ಲಿ ಸರ್ಕಾರವು ನೈಸರ್ಗಿಕ ವಿಪತ್ತಿನಲ್ಲಿ ಸಂಕಷ್ಟಕ್ಕೆ ಒಳಗಾದ ರಾಜ್ಯದ ಜನರಿಗೆ ಹೆಗಲಿಗೆ ಹೆಗಲಿ ಕೊಟ್ಟು ನಿಲ್ಲಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನವೆಂಬರ್ 30ರಂದು ಫೆಂಗಲ್ ಚಂಡಮಾರುತದಿಂದ ಹಾನಿಗೊಳಗಾದ ತಮಿಳುನಾಡು ಜನರಿಗೆ ನೆರವು ನೀಡಲು ಎಸ್‌ಡಿಆರ್‌ಎಫ್ ಮೂಲಕ ಎರಡು ಕಂತಿನಲ್ಲಿ 944.8 ಕೋಟಿ ನೀಡಲು ಅನುಮೋದನೆ ನೀಡಿದೆ.
ಅಂತರ ಸಚಿವಾಲಯ ಕೇಂದ್ರ ತಂಡವನ್ನು ತಮಿಳುನಾಡು ಮತ್ತು ಪುದುಚೇರಿಗೆ ಹಾನಿ ಪ್ರಮಾಣದ ಅಂದಾಜು ನಡೆಸುವಂತೆ ಕಳುಹಿಸಲಾಗಿದೆ. ಐಎಂಸಿಟಿಯ ಮೌಲ್ಯಮಾಪನ ವರದಿ ಬಳಿಕ ಅದರ ಅನುಸಾರವಾಗಿ ವಿಪತ್ತು ಪೀಡಿತ ರಾಜ್ಯಕ್ಕೆ ಎನ್‌ಡಿಆರ್‌ಎಫ್‌ನಿಂದ ಹೆಚ್ಚುವರಿ ಆರ್ಥಿಕ ಸಹಾಯ ಅನುಮೋದಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇಶದ 28 ರಾಜ್ಯಗಳಿಗೆ ವಿಪತ್ತು ಪರಿಹಾರವಾಗಿ ಈಗಾಗಲೇ ಕೇಂದ್ರ ಸರ್ಕಾರ 21,718.716 ಕೋಟಿ ರೂ.ಗಿಂತ ಹೆಚ್ಚು ಹಣ ಬಿಡುಗಡೆ ಮಾಡಿದೆ. ಎಸ್‌ಡಿಆರ್‌ಎಫ್‌ನಿಂದ 26 ರಾಜ್ಯಗಳಿಗೆ ರೂ.14,878.40 ಕೋಟಿ, ಎನ್‌ಡಿಆರ್‌ಎಫ್‌ನಿಂದ 18 ರಾಜ್ಯಗಳಿಗೆ ರೂ.4,808.32 ಕೋಟಿ, ಹಾಗೂ 11 ರಾಜ್ಯಗಳಿಗೆ ಎಸ್ಡಿಎಂಎಫ್ನಿಂದ ನಿಧಿ ಬಿಡುಗಡೆ ಮಾಡಲಾಗಿದೆ.
ಆರ್ಥಿಕ ಜೊತೆಗೆ, ಎಲ್ಲಾ ಪ್ರವಾಹ ಮತ್ತು ಚಂಡಮಾರುತ ಪೀಡಿತ ರಾಜ್ಯಗಳಿಗೆ ಅಗತ್ಯವಿರುವ ಎನ್ಡಿಆರ್ಎಫ್, ಸೇನಾ ಮತ್ತು ವಾಯು ತಂಡದ ಬೆಂಬಲವನ್ನು ನೀಡಲಾದೆ. ರಾಜ್ಯದಲ್ಲಿ ಫೆಂಗಲ್ ಚಂಡಮಾರುತದಿಂದ ಅಪಾರ ಹಾನಿಯಾಗಿದ್ದು, ಉತ್ತರ ತಮಿಳುನಾಡಿನ ವಿಲ್ಲುಪುರಂ, ತಿರುವಣ್ಣಾಮಲೈ ಮತ್ತು ಕಲ್ಲಕುರಿಚಿ ಜಿಲ್ಲೆಗಳಲ್ಲಿ ಹೆಚ್ಚು ಪರಿಣಾಮ ಉಂಟಾಗಿದೆ. ಇದರಿಂದ 69 ಲಕ್ಷಕ್ಕೂ ಹೆಚ್ಚು ಕುಟುಂಬಳ 1.5 ಕೋಟಿ ಜನರು ವಿಪತ್ತಿಗೆ ಒಳಗಾಗಿದ್ದಾರೆ.
ಈ ನಿಟ್ಟಿನಲ್ಲಿ ಅವರಿಗೆ ತಾತ್ಕಾಲಿಕ ಪುನರ್ಜೀವನ ಪ್ರಯತ್ನ ಕಲ್ಪಿಸಲು ಅಂದಾಜು 2,475 ಕೋಟಿ ರೂ.ಗಳ ಅಗತ್ಯವಿದೆ ಎಂದು ಸ್ಟಾಲಿನ್ ತಿಳಿಸಿದ್ದರು.
ಫೆಂಗಲ್ ಚಂಡಮಾರುತದ ದುರಂತ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದು ಈ ನೈಸರ್ಗಿಕ ವಿಪತ್ತು ನಿರ್ವಹಣೆಗೆ ರಾಜ್ಯಕ್ಕೆ ತುರ್ತು ಹಣಕಾಸಿನ ನೆರವಿನ ಅಗತ್ಯವಿದೆ ಎಂದಿದ್ದರು.
ಇದನ್ನೂ ಓದಿ: ಕುವೈತ್ ಬ್ಯಾಂಕ್ಗೆ 700 ಕೋಟಿ ರೂ. ವಂಚನೆ; ಸಾಲ ಪಡೆದು ದೇಶ ತೊರೆದ 1,425 ಕೇರಳಿಗರು!