ಮಥುರಾ, ಉತ್ತರಪ್ರದೇಶ: ಪತಿ ಜತೆಗಿನ ಜಗಳದ ಕಾರಣದಿಂದ ಮಹಿಳೆಯೊಬ್ಬರು ಬೇಸತ್ತು ಹೋಗಿದ್ದರು. ಇದರಿಂದ ಮನನೊಂದ ಆಕೆ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಆತ್ಮಹತ್ಯೆಕ್ಕೆ ಯತ್ನಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ನೋಡ ನೋಡುತ್ತಿದ್ದಂತೆ ಸ್ಥಳದಲ್ಲಿ ಜನ ಜಮಾಯಿಸಿದ್ದರು. ಸುದ್ದಿ ತಿಳಿದ ಕೂಡಲೇ ಪೊಲೀಸರೂ ಸಹ ಸ್ಥಳಕ್ಕೆ ಬಂದರು. ಬಳಿಕ ಪೊಲೀಸರು ಡೈವರ್‌ಗಳನ್ನು ಕರೆಯಿಸಿದ್ದರು. ಸಾಕಷ್ಟು ಪ್ರಯತ್ನದ ನಂತರ ಈಜುಗಾರರು ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ ಮಕ್ಕಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಮೂವರೂ ಮಕ್ಕಳು ನೀರಿನಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.
ಪತಿಯೊಂದಿಗೆ ಜಗಳ, ಮಕ್ಕಳೊಂದಿಗೆ ಮನೆ ತೊರೆದ ಗೃಹಿಣಿ: ಈ ಘಟನೆ ಕುರಿತಂತೆ ಎಸ್ಪಿ ಅರವಿಂದ್ ಕುಮಾರ್ ಮಾತನಾಡಿ, ‘‘ನಗರದ ಪಂಜಾಬಿ ಫೇಸ್ ಕಾಲೋನಿ ನಿವಾಸಿ ಪೂನಂ ತನ್ನ ಪತಿ ಹರಿ ಓಂ ಅವರೊಂದಿಗೆ ಕೆಲವು ದಿನಗಳಿಂದಲೂ ಜಗಳವಾಡುತ್ತಿದ್ದರು ಎಂಬ ಮಾಹಿತಿ ಇದೆ. ಸೋಮವಾರ ರಾತ್ರಿಯೂ ಸಹ ಇಬ್ಬರ ನಡುವೆ ಜಗಳ ನಡೆದಿದೆ. ಇದಾದ ಬಳಿಕ ಪೂನಂ ತನ್ನ ಮೂವರು ಮಕ್ಕಳಾದ 8 ವರ್ಷದ ಅಂಶಿಕಾ, 6 ವರ್ಷದ ವಂಶಿಕಾ ಮತ್ತು 3 ವರ್ಷದ ಚಾರು ಅವರೊಂದಿಗೆ ರಾತ್ರಿ ಮನೆಬಿಟ್ಟು ಹೊರ ಹೋಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ತಾಯಿ ತನ್ನ ಮಕ್ಕಳೊಂದಿಗೆ ಯಮುನಾ ನದಿ ದಡಕ್ಕೆ ತೆರಳಿದ್ದಾರೆ. ನೋಡ ನೋಡುತ್ತಿದ್ದಂತೆ ನಾಲ್ವರು ನದಿಗೆ ಹಾರಿದ್ದಾರೆ. ಇದನ್ನು ನೋಡಿದ ಕೆಲವರು ಜೋರಾಗಿ ಕೂಗಿದ್ದಾರೆ ಅವರ ಕೂಗು ಕೇಳಿ ಸುತ್ತಮುತ್ತ ಇದ್ದ ಜನ ಸ್ಥಳದಲ್ಲಿ ಜಮಾಯಿಸಿದ್ದಾರೆ. ಹೀಗೆ ಬಂದ ಜನರು, ಬಳಿಕ ಪೊಲೀಸರಿಗೆ ಘಟನೆ ಕುರಿತಂತೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಕೈಗೊಂಡರು‘‘ ಎಂದು ಮಾಹಿತಿ ನೀಡಿದರು.
ಮಹಿಳೆಗೆ ಚಿಕಿತ್ಸೆ: ಕೂಡಲೇ ಪೊಲೀಸರು ಡೈವರ್‌ಗಳನ್ನು ಕರೆಯಿಸಲಾಯಿತು. ಸಾಕಷ್ಟು ಪ್ರಯತ್ನದ ನಂತರ ಈಜುಗಾರರು ಮಹಿಳೆಯನ್ನು ಸುರಕ್ಷಿತವಾಗಿ ಹೊರಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನದಿಯಲ್ಲಿ ಮಕ್ಕಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಸ್ವಲ್ಪ ಸಮಯದ ಹುಡುಕಾಟದ ನಂತರ ಮೂವರು ಮಕ್ಕಳ ಮೃತದೇಹಗಳು ಪತ್ತೆಯಾದವು. ಕೂಡಲೇ ಮಕ್ಕಳಿಬ್ಬರನ್ನೂ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತಾದರೂ, ಮೂವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮಹಿಳೆಗೆ ಚಿಕಿತ್ಸೆ ಮುಂದುವರಿದಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಭಾರತೀಯ ನೌಕಾಪಡೆ ಮಾಜಿ ಸಿಬ್ಬಂದಿ ಬಿಡುಗಡೆ ಬೆನ್ನಲ್ಲೇ ಫೆ.14ರಂದು ಮೋದಿ ಕತಾರ್ ಭೇಟಿ