ಲಖನೌ(ಉತ್ತರ ಪ್ರದೇಶ): ವರನೊಬ್ಬ ವಧುವಿನ ಕಡೆಯವರು ಸ್ಕಾರ್ಪಿಯೋ ಕಾರು ಕೊಡಿಸದಿದ್ದಕ್ಕೆ ಮದುವೆ ನಿರಾಕರಿಸಿದ ಘಟನೆ ನಡೆದಿದೆ. ಮದುವೆಗೂ ಮುನ್ನ ವರ ವಧುವಿನ ತಾಯಿಗೆ ಕರೆ ಮಾಡಿ ಸ್ಕಾರ್ಪಿಯೋ ಕಾರಿಗೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ವಧುವಿನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ವಧುವಿನ ಕಡೆಯವರು ಮದುವೆ ಮಂಟಪಕ್ಕೆ ಹಣ ಪಾವತಿ ಸೇರಿದಂತೆ ಇತರ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ದೂರಿನ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಮಲಿಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ಮಹಿಳೆಯೊಬ್ಬರು ತನ್ನ ಮಗಳ ಮದುವೆಯನ್ನು ಠಾಕೂರ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಧವಪುರದ ನಿವಾಸಿ ಸರೋಜ್ ಅವರೊಂದಿಗೆ ನಿಶ್ಚಯಿಸಿದ್ದರು. ಕಳೆದ ವರ್ಷ ಡಿಸೆಂಬರ್ 17 ರಂದು ಮದುವೆ ನಿಶ್ಚಿತಾರ್ಥ ನಡೆದಿತ್ತು. ಜನವರಿ 26 ರಂದು ಮದುವೆ ಮತ್ತು ಫೆಬ್ರವರಿ 22 ರಂದು ತಿಲಕ ಸಮಾರಂಭವನ್ನು ನಿಗದಿಪಡಿಸಲಾಗಿತ್ತು. ಆದರೆ, ಜನವರಿ 25ರಂದು ವರ, ವಧುವಿನ ತಾಯಿಗೆ ಕರೆ ಮಾಡಿ ಸ್ಕಾರ್ಪಿಯೋ ಕಾರು ನೀಡದಿದ್ದರೆ ಮದುವೆಯಾಗುವುದಿಲ್ಲ ಎಂದು ಹೇಳಿರುವುದಾಗಿ, ವಧುವಿನ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ದೂರಿನಲ್ಲಿ ವಧುವಿನ ತಾಯಿ ಹೇಳಿದ್ದಿಷ್ಟು: "ವರನ ಕಡೆಯವರ ಬೇಡಿಕೆಯಂತೆ ವರನ ಶಾಪಿಂಗ್ಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದೇನೆ. ಇದಲ್ಲದೇ, ಅವರ ಪ್ರತಿಯೊಂದು ಸಣ್ಣ ಬೇಡಿಕೆಯನ್ನು ಈಡೇರಿಸಲಾಗಿದೆ. ಮಗಳ ಮದುವೆ ಆಮಂತ್ರಣ ಪತ್ರಿಕೆಗಳನ್ನು ಸಂಬಂಧಿಕರಿಗೆ ಮತ್ತು ನೆರೆಹೊರೆಯವರಿಗೆ ವಿತರಿಸಲಾಗಿದೆ. ಜೊತೆಗೆ ಮದುವೆ ಮಂಟಪ ಮತ್ತು ಊಟದ ವ್ಯವಸ್ಥೆ ಮಾಡಲು ಹಣ ಕೂಡಾ ಪಾವತಿಸಲಾಗಿದೆ. ಜನವರಿ 25ರಂದು ವರ ಕರೆ ಮಾಡಿ ಸ್ಕಾರ್ಪಿಯೋ ಕಾರು ಕೊಡಿಸದಿದ್ದರೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ" ಎಂದು ವಧುವಿನ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಮಲಿಹಾಬಾದ್ ಪೊಲೀಸ್ ಠಾಣೆಯ ಉಸ್ತುವಾರಿ ಸುರೇಶ್ ಸಿಂಗ್ ಮಾತನಾಡಿ, ಸ್ಕಾರ್ಪಿಯೋ ಕಾರಿನ ಬೇಡಿಕೆ ಇಟ್ಟಿದ್ದ ವರನು ಮದುವೆಗೂ ಒಂದು ದಿನ ಮೊದಲು ಮದುವೆಯಾಗಲು ನಿರಾಕರಿಸಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಚಿತ್ರದುರ್ಗ: ತಾಳಿ ಕಟ್ಟುತ್ತಿದ್ದಾಗ ಮದುವೆ ನಿರಾಕರಿಸಿದ ವಧು!
ಮದ್ಯ ಸೇವಿಸಿದ ವರ, ಮದುವೆಯನ್ನೇ ನಿರಾಕರಿಸಿದ ವಧು(ಉತ್ತರ ಪ್ರದೇಶ): ಮದ್ಯ ಸೇವನೆ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೇ ಮದುವೆಗೂ ಆಪತ್ತು ತರುತ್ತದೆ ಎಂಬುದು ವಾರಾಣಸಿಯಲ್ಲಿ ಸಾಬೀತಾಗಿತ್ತು. ಇಲ್ಲಿಯ ಹರ್ಹುವಾದನ ಚೌಬೆಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರ ಯುವಕನ ವಿವಾಹವು ಜನ್ಸಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ಹುಡುಗಿಯೊಂದಿಗೆ ನಿಶ್ಚಯವಾಗಿತ್ತು. ಮದುವೆಗಾಗಿ ಹರ್ಹುವಾದಲ್ಲಿ ಕಲ್ಯಾಣ ವೇದಿಕಯೆನ್ನೂ ಸಿದ್ಧಗೊಳಿಸಿಲಾಗಿತ್ತು. ವರನ ಕೊರಳಿಗೆ ಮಾಲೆ ಹಾಕಲು ವಧು ಮುಂದಾಗಿದ್ದ ವೇಳೆ ವರ ಮದ್ಯಸೇವನೆ ಮಾಡಿರುವುದು ತಿಳಿದು ಬಂದಿತ್ತು. ಇದರಿಂದ ಕೋಪಗೊಂಡ ವಧು ವೇದಿಕೆಯಿಂದ ಕೆಳಗಿಳಿದು ಏನನ್ನೂ ಹೇಳದೇ ತನ್ನ ಕೋಣೆಗೆ ಹೊರಟು ಹೋಗಿದ್ದಳು. ಕೊನೆಗೆ ಮದುವೆ ಮುರಿದು ಬಿದ್ದಿತ್ತು.