ನವದೆಹಲಿ: ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಬಿಆರ್‌ಎಸ್ ಮುಖಂಡ ಕೆ. ಕವಿತಾಗೆ ದೊಡ್ಡ ಹಿನ್ನಡೆಯಾಗಿದೆ. ರೋಸ್ ಅವೆನ್ಯೂ ಕೋರ್ಟ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಬಿಆರ್‌ಎಸ್ ಎಂಎಲ್‌ಸಿ ಕೆ. ಕವಿತಾ ಅವರ ನ್ಯಾಯಾಂಗ ಬಂಧನವನ್ನು ಮೇ 7ರ ವರೆಗೆ ವಿಸ್ತರಿಸಿದೆ. ಇಬ್ಬರ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯವಾಗಿತ್ತು. ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಕೆ. ಕವಿತಾ ಅವರನ್ನು ಇಡಿ ಬಂಧಿಸಿತ್ತು.
ನ್ಯಾಯಾಂಗ ಬಂಧನದ ಅವಧಿ ಮುಗಿದ ನಂತರ, ಅರವಿಂದ್ ಕೇಜ್ರಿವಾಲ್ ಮತ್ತು ಕೆ. ಕವಿತಾ ಮಂಗಳವಾರ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದರು. ಸಿಬಿಐ ಮತ್ತು ಇಡಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಅವರ ಕಸ್ಟಡಿಯನ್ನು ವಿಸ್ತರಿಸಿದರು.
ಸಿಬಿಐ ತನಿಖೆ ನಡೆಸುತ್ತಿರುವ ಸಂಬಂಧಿತ ಭ್ರಷ್ಟಾಚಾರ ಪ್ರಕರಣದಲ್ಲಿ ತೆಲಂಗಾಣ ಎಂಎಲ್‌ಸಿ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರ ನ್ಯಾಯಾಂಗ ಬಂಧನವನ್ನು ಮೇ 7ರ ವರೆಗೆ ನ್ಯಾಯಾಧೀಶರು ವಿಸ್ತರಿಸಿದ್ದಾರೆ. ಕವಿತಾ ಅವರನ್ನು ಸಿಬಿಐ ಬಂಧಿಸಿತ್ತು.
ಸಿಬಿಐ ಪ್ರಕರಣದಲ್ಲಿ ಕವಿತಾ ಅವರ ಜಾಮೀನು ಕುರಿತು ವಾದ ಆಲಿಸಿದ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದು ಗೊತ್ತೇ ಇದೆ. ಮೇ 2 ರಂದು ಅಂತಿಮ ಆದೇಶ ನೀಡಲಾಗುವುದು ಎಂದು ಘೋಷಿಸಲಾಗಿದೆ. ಇಡಿ ಪ್ರಕರಣದಲ್ಲಿ ನಿನ್ನೆಯ ವಿಚಾರಣೆಯ ಮುಂದುವರಿದ ಭಾಗವಾಗಿ ಇಂದು ವಾದಗಳು ಮುಂದುವರೆದ್ದವು. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮಾರ್ಚ್ 15 ರಂದು ಬಂಧಿತರಾಗಿದ್ದ ಕವಿತಾ ಪ್ರಸ್ತುತ ನ್ಯಾಯಾಂಗ ಬಂಧನದ ಭಾಗವಾಗಿ ತಿಹಾರ್ ಜೈಲಿನಲ್ಲಿದ್ದಾರೆ.