ಕಂಕೇರ್ (ಛತ್ತೀಸ್ಗಢ): ಛತ್ತೀಸ್ಗಢದ ಕಂಕೇರ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ಜರುಗಿದೆ. ಇದರಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಇದೇ ಎನ್‌ಕೌಂಟರ್‌ನಲ್ಲಿ ಓರ್ವ ನಕ್ಸಲ್ ಹತನಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಛೋಟಾಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿದೂರ್ ಅರಣ್ಯದಲ್ಲಿ ಇಂದು ಬೆಳಗ್ಗೆ ನಕ್ಸಲರ ಇರುವಿಕೆ ಬಗ್ಗೆ ಭದ್ರತಾ ಸಿಬ್ಬಂದಿಗೆ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಯೋಧರು ಆ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಇದೇ ವೇಳೆ ಯೋಧರ ಮೇಲೆ ನಕ್ಸಲರು ಹೊಂಚು ಹಾಕಿ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಬಸ್ತಾರ್ ಫೈಟರ್ ಪಡೆಯ ಯೋಧ ರಮೇಶ್ ಕುರೇತಿ ಎಂಬುವರು ಹುತಾತ್ಮರಾಗಿದ್ದಾರೆ. ಇದೇ ವೇಳೆ, ಯೋಧರ ಗುಂಡಿನ ದಾಳಿಯಲ್ಲಿ ಒಬ್ಬ ನಕ್ಸಲ್ ಕೂಡ ಹತನಾಗಿದ್ದಾನೆ.
ಹಿದೂರ್ ಅರಣ್ಯದಲ್ಲಿ ಯೋಧರ ಪಡೆ ಎಂದಿನಂತೆ ಗಸ್ತು ತಿರುಗುತ್ತಿತ್ತು. ಆಗ ಶಸ್ತ್ರಸಜ್ಜಿತ ನಕ್ಸಲರು ಹೆಚ್ಚಿನ ಸಂಖ್ಯೆಯಲ್ಲಿ ಸಭೆ ಸೇರುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಅಂತೆಯೇ, ಡಿಆರ್‌ಜಿ, ಬಸ್ತಾರ್ ಫೈಟರ್ ಮತ್ತು ಬಿಎಸ್‌ಎಫ್ ಸಿಬ್ಬಂದಿ ಇಡೀ ಪ್ರದೇಶವನ್ನು ಸುತ್ತುವರಿದ್ದರು. ಆಗ ನಕ್ಸಲರ ದಾಳಿಯಿಂದ ಎನ್‌ಕೌಂಟರ್ ಶುರುವಾಗಿದೆ. ಇದರಲ್ಲಿ ನಮ್ಮ ಯೋಧ ರಮೇಶ್ ಕುರೇತಿ ಪ್ರಾಣಕಳೆದುಕೊಂಡಿದ್ದಾರೆ. ಇದೇ ಪ್ರದೇಶದಲ್ಲಿ ಓರ್ವ ನಕ್ಸಲ್ನ ಶವ, ಎಕೆ 47 ರೈಫಲ್ ಸಹ ಪತ್ತೆಯಾಗಿದೆ. ಆದರೆ, ಹತ್ಯೆಯಾದ ನಕ್ಸಲ್ನ ಗುರುತು ಇನ್ನೂ ಪತ್ತೆಯಾಗಿಲ್ಲ. ಜೊತೆಗೆ ಈ ಎನ್‌ಕೌಂಟರ್‌ನಲ್ಲಿ ಇನ್ನೂ ಇಬ್ಬರು ನಕ್ಸಲರು ಹತರಾಗಿರುವ ಶಂಕೆ ವ್ಯಕ್ತವಾಗಿದೆ. ಶೋಧ ಕಾರ್ಯ ಮುಂದುವರೆದಿದೆ ಎಂದು ಕಂಕೇರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಂದಿರಾ ಕಲ್ಯಾಣ್ ಅಲೆಸೆಲ ತಿಳಿಸಿದ್ದಾರೆ.
ದಾಂತೇವಾಡದಲ್ಲಿ ನಕ್ಸಲರ ಸ್ಮಾರಕ ಧ್ವಂಸ: ಮತ್ತೊಂದೆಡೆ, ದಾಂತೇವಾಡ ಜಿಲ್ಲೆಯಲ್ಲೂ ಭದ್ರತಾ ಪಡೆಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ವೇಳೆ, ಅರನ್ ಪುರದ ಪೊಟಲಿ ಕ್ಯಾಂಪ್ನಲ್ಲಿ ನಕ್ಸಲರು ನಿರ್ಮಿಸಿದ್ದ ಸ್ಮಾರಕವನ್ನು ಜೆಸಿಬಿ ಸಹಾಯದಿಂದ ಕೆಡವಲಾಗಿದೆ ಎಂದು ದಾಂತೇವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ಮಾಹಿತಿ ನೀಡಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಹಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಈ ಹುಡುಕಾಟದ ಸಮಯದಲ್ಲಿ ಎನ್‌ಕೌಂಟರ್‌ನಲ್ಲಿ ಹತರಾದ ನಕ್ಸಲರ ನೆನಪಿಗಾಗಿ ನಿರ್ಮಿಸಲಾದ ಸ್ಮಾರಕ ಕಂಡುಬಂದಿತ್ತು. ಕೂಡಲೇ ಯೋಧರು ಜೆಸಿಬಿ ಸಹಾಯದಿಂದ ಸ್ಮಾರಕವನ್ನು ನೆಲಸಮ ಮಾಡಿದ್ದಾರೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಪಟಾಕಿ ತಯಾರಿಕೆ ವೇಳೆ ಸ್ಫೋಟ: ಪತಿ ಸಾವು, ಪತ್ನಿಗೆ ಗಂಭೀರ ಗಾಯ