ತಿರುವನಂತಪುರಂ(ಕೇರಳ): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಸ್‌ಡಿಪಿಐ ಘೋಷಿಸಿದ್ದ ಬೆಂಬಲವನ್ನು ಕೇರಳ ಕಾಂಗ್ರೆಸ್ ಗುರುವಾರ ತಿರಸ್ಕರಿಸಿದೆ. ತನ್ನ ಯುಡಿಎಫ್ ಮೈತ್ರಿಕೂಟವನ್ನು ಬೆಂಬಲಿಸಲು ವೈಯಕ್ತಿಕವಾಗಿ ಮತದಾರರನ್ನು ಪಕ್ಷ ಸ್ವಾಗತಿಸಿದೆ.
ಇತ್ತೀಚೆಗೆ ಕೇಂದ್ರದಿಂದ ನಿಷೇಧಗೊಂಡ ಪಿಎಫ್‌ಐನ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ರಾಜಕೀಯ ಅಂಗವೇ ಈ ಎಸ್‌ಡಿಪಿಐ. ಅಂದರೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ. ಕಾಂಗ್ರೆಸ್‌ಗೆ ಎಸ್‌ಡಿಪಿಐ ಬೆಂಬಲ ಘೋಷಿಸಿದ್ದ ವಿಷಯ ಚರ್ಚೆಗೆ ಕಾರಣವಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರಶ್ನೆ ಮಾಡಲು ಆರಂಭಿಸಿತ್ತು. ಇಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ, ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಕಾಂಗ್ರೆಸ್ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಎರಡೂ ರೀತಿಯ ಕೋಮುವಾದವನ್ನು ವಿರೋಧಿಸುತ್ತದೆ ಎಂದು ಸ್ಪಷ್ಟಪಡಿಸಿದರು.
''ನಾವು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದವನ್ನು ವಿರೋಧಿಸುತ್ತೇವೆ. ಇದೇ ಸಂದರ್ಭಗಳಲ್ಲಿ ಯುಡಿಎಫ್‌ಗೆ ಎಸ್‌ಡಿಪಿಐ ನೀಡುವ ಬೆಂಬಲವನ್ನು ಇದೇ ನಿಟ್ಟಿನಲ್ಲಿ ವೀಕ್ಷಿಸಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಇಚ್ಛೆಗೆ ಅನುಗುಣವಾಗಿ ಮತ ಚಲಾಯಿಸಬಹುದು. ಎಲ್ಲರೂ ಯುಡಿಎಫ್‌ಗೆ ಮತ ಹಾಕಬೇಕೆಂದು ನಾವು ಬಯಸುತ್ತೇವೆ. ಆದರೆ, ಸಂಘಟನೆಗಳ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ'' ಎಂದು ಸತೀಶನ್ ಹೇಳಿದರು. ಇದೇ ವೇಳೆ, ಮತ್ತಷ್ಟು ವಿವರಣೆ ನೀಡಲು ಅವರು ನಿರಾಕರಿಸಿದರು.
ಮುಂಬರುವ ಲೋಕಸಭೆ ಚುನಾವಣೆಗೆ ಕೇರಳ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಎಸ್‌ಡಿಪಿಐ ತನ್ನ ಬೆಂಬಲವನ್ನು ಸೋಮವಾರ ಘೋಷಿಸಿದೆ. ಆದರೆ, ಎಸ್‌ಡಿಪಿಐ ಜತೆ ಯುಡಿಎಫ್ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಕಾಂಗ್ರೆಸ್ ಹೇಳಿತ್ತು. ಅನೇಕ ಪಕ್ಷಗಳು ಯುಡಿಎಫ್‌ಗೆ ಬೆಂಬಲ ನೀಡುತ್ತಿವೆ. ಆದರೆ, ಎಸ್‌ಡಿಪಿಐ ಜತೆ ಯಾವುದೇ ಚರ್ಚೆ ನಡೆಸಿಲ್ಲ ಅಥವಾ ಯಾವುದೇ ಒಪ್ಪಂದ ಕೂಡ ಮಾಡಿಕೊಂಡಿಲ್ಲ ಎಂದು ಸತೀಶನ್ ಈ ಹಿಂದೆಯೂ ಹೇಳಿದ್ದರು.
ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಭರ್ಜರಿ ಗೆಲುವು ಸಾಧಿಸಿದ್ದವು. 20 ಕ್ಷೇತ್ರಗಳ ಪೈಕಿ 19 ಸ್ಥಾನಗಳನ್ನು ಯುಡಿಎಫ್ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಇದರಲ್ಲಿ ಕಾಂಗ್ರೆಸ್ 15 ಸ್ಥಾನ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಎರಡು ಸ್ಥಾನ, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಒಂದು ಸ್ಥಾನ ಮತ್ತು ಕೇರಳ ಕಾಂಗ್ರೆಸ್ (ಎಂ) ಒಂದು ಸ್ಥಾನ ಗೆದ್ದಿತ್ತು. ಅಲಪ್ಪುಳದಲ್ಲಿ ಮಾತ್ರ ಕಾಂಗ್ರೆಸ್‌ಗೆ ಸೋಲಾಗಿತ್ತು. ಪಕ್ಷದ ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಆಯ್ಕೆ ಬಯಸಿದ್ದಾರೆ.
ಇದನ್ನೂ ಓದಿ: ವಯನಾಡಿನಲ್ಲಿ ಭರ್ಜರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ