ನವದೆಹಲಿ: ಇಂದಿನಿಂದ ಜಾರಿಗೆ ಬಂದಿರುವ ಮೂರು ಹೊಸ ಕಾನೂನು ಸಂಹಿತೆಗಳನ್ನು ಇಂಡಿಯಾ ಮೈತ್ರಿಕೂಟ ಒಪ್ಪುವುದಿಲ್ಲ. ಇವನ್ನು ಸಂಸತ್ತಿನಲ್ಲಿ ವಿಪಕ್ಷಗಳ ಸಂಸದರ ಅನುಪಸ್ಥಿತಿಯಲ್ಲಿ 'ಬಲವಂತವಾಗಿ' ಅಂಗೀಕರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಹೊಸ ಸಂಹಿತೆಗಳು ಬುಲ್ಡೋಜರ್ ನ್ಯಾಯ ಎಂದು ಟೀಕಿಸಿರುವ ಕಾಂಗ್ರೆಸ್, ಈ ಕಾನೂನುಗಳು ಹೆಚ್ಚು ದಿನ ಅಸ್ತಿತ್ವದಲ್ಲಿ ಇರುವುದಿಲ್ಲ. ಉತ್ತಮ ಆಡಳಿತ ವ್ಯವಸ್ಥೆಗೆ ಇವು ಸರಿ ಹೊಂದುವುದಿಲ್ಲ ಎಂದು ಪಕ್ಷ ಹೇಳಿದೆ. ಈ ಮೂಲಕ ಕಾಯ್ದೆಗಳು ಜಾರಿಯಾದ ಮೊದಲ ದಿನವೇ ಅಪಸ್ವರ ಎತ್ತಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, 18ನೇ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಮತ್ತು ನೈತಿಕ ಆಘಾತ ಅನುಭವಿಸಿದ ನಂತರ, ಪ್ರಧಾನಿ ಮೋದಿ ಮತ್ತು ಬಿಜೆಪಿ ಸಂವಿಧಾನವನ್ನು ಗೌರವಿಸುವಂತೆ ನಟಿಸುತ್ತಿದ್ದಾರೆ. ಆದರೆ, ಸಂವಿಧಾನದ ಅಡಿ ಬರುವ ಈ ಕಾನೂನುಗಳನ್ನು ಸಂಸತ್ತಿನಲ್ಲಿ ವಿಪಕ್ಷಗಳ 146 ಸಂಸದರನ್ನು ಅಮಾನತು ಮಾಡಿದಾಗ ಸರ್ವರ ಒಪ್ಪಿಗೆ ಇಲ್ಲದೇ ಅಂಗೀಕರಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಸಂಸದೀಯ ವ್ಯವಸ್ಥೆಯಲ್ಲಿ ಈ ಕಾನೂನುಗಳು 'ಬುಲ್ಡೋಜರ್ ನ್ಯಾಯ'ವನ್ನು ಹೊಂದಿವೆ. ಇಂತಹ ನ್ಯಾಯ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಇಂಡಿಯಾ ಮೈತ್ರಿಕೂಟ ಒಪ್ಪುವುದಿಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದ್ದಾರೆ.
ಸರ್ಕಾರದ ವಾದವೇನು?: ಬದಲಾದ ಕಾಲಕ್ಕೆ ತಕ್ಕಂತೆ ಭಾರತೀಯರಿಗಾಗಿ ಭಾರತೀಯರೇ ರೂಪಿಸಿರುವ ಕಾನೂನುಗಳು ಇವಾಗಿವೆ. ಸ್ವಾತಂತ್ರ್ಯದ ವೇಳೆಯ ಕಾನೂನುಗಳನ್ನು ರದ್ದು ಮಾಡಿ, ಹೊಸ ಮತ್ತು ಅನುಕೂಲಕರವಾಗಿರುವ ನಿಯಮಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಹೊಸ ಕಾನೂನುಗಳ ರೂಪಿಸುವ ನೇತೃತ್ವ ವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಹೊಸ ಕಾನೂನುಗಳು ದಕ್ಷ ನ್ಯಾಯ ಒದಗಿಸಲು ಆದ್ಯತೆ ನೀಡುತ್ತವೆ. ವಸಾಹತುಶಾಹಿ ಕಾಲದ ಕಾನೂನುಗಳು ದಂಡಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಅದನ್ನು ಬದಲಿಸಲಾಗಿದೆ. ಮೂರು ಹೊಸ ಅಪರಾಧ ಕಾನೂನುಗಳು ದೇಶಾದ್ಯಂತ ಸೋಮವಾರದಿಂದ ಜಾರಿಗೆ ಬಂದಿದ್ದು, ನ್ಯಾಯ ವ್ಯವಸ್ಥೆಯಲ್ಲಿ ದೂರಗಾಮಿ ಬದಲಾವಣೆಗಳನ್ನು ತರಲಿವೆ ಎಂದಿದ್ದಾರೆ.
ಯಾವೆಲ್ಲಾ ಕಾನೂನುಗಳು ಜಾರಿ: ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಮತ್ತು ಭಾರತೀಯ ಸಾಕ್ಷಿ ಅಧಿನಿಯಮ (ಬಿಎಸ್ಎ) ಹೊಸ ಕಾನೂನುಗಳು ಜಾರಿಯಾಗಿವೆ.
ಇದನ್ನೂ ಓದಿ: ಜುಲೈ 1 ರಿಂದ ಹೊಸ ಅಪರಾಧ ಕಾನೂನುಗಳು ಜಾರಿ: 40 ಲಕ್ಷ ಜನರಿಂದ ತರಬೇತಿ - new criminal laws