ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಬಜೆಟ್ ದೇಶದ ಮಧ್ಯಮ ವರ್ಗದವರ ಪರ ಎಂಬುದು ಆರ್ಥಿಕ ತಜ್ಞರ ಮಾತಾಗಿದೆ. ಆದರೆ, ವಿಪಕ್ಷ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಕೂಟದ ಸದಸ್ಯ ಪಕ್ಷಗಳು ಮಾತ್ರ ಬಜೆಟ್ ಅನ್ನು 'ಪಕ್ಷಪಾತ' ಎಂದು ದೂರಿವೆ. ಆಯವ್ಯಯದ ಮೇಲಿನ ಚರ್ಚೆಯಲ್ಲಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ.
ಬಿಹಾರ, ಆಂಧ್ರಪ್ರದೇಶ ಮತ್ತು ಬಿಜೆಪಿ ಸರ್ಕಾರ ಆಡಳಿತದಲ್ಲಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಒಕ್ಕೂಟ ವ್ಯವಸ್ಥೆಯನ್ನು ಎನ್‌ಡಿಎ ಸರ್ಕಾರ ಉಲ್ಲಂಘಿಸಿದೆ. ಅದರ ವಿರುದ್ಧ ವಿಪಕ್ಷಗಳ ಸಹಾಯದಿಂದ ಸಂಸತ್ತಿನಲ್ಲಿ ಜಂಗೀ ಕುಸ್ತಿಗೆ ರೆಡಿಯಾಗಿದೆ.
ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಕರ್ನಾಟಕ, ಹಿಮಾಚಲ ಪ್ರದೇಶ, ಜಾರ್ಖಂಡ್, ದೆಹಲಿ ಮತ್ತು ಪಂಜಾಬ್‌ನಂತಹ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳು ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ದೂರಿ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಇದೀಗ ಬಜೆಟ್ನಲ್ಲಿನ ಅಂಶಗಳನ್ನು ಇಟ್ಟುಕೊಂಡು ಮತ್ತೊಂದು ಹೋರಾಟಕ್ಕೆ ತಂತ್ರ ರೂಪಿಸಿವೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಅನ್ನು ರಾಜ್ಯಸಭೆಯಲ್ಲಿ ವಿಪಕ್ಷಗಳ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಟೀಕಿಸಿದ್ದಾರೆ. ಎನ್‌ಡಿಎ ಸರ್ಕಾರ ವಿರೋಧ ಪಕ್ಷಗಳ ಆಡಳಿತದ ರಾಜ್ಯಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ. ಮಿತ್ರಪಕ್ಷವಾದ ಟಿಡಿಪಿ, ಜೆಡಿಯು ಆಡಳಿತ ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಬಂಪರ್ ಅನುದಾನ ನೀಡಲಾಗಿದೆ ಎಂದು ಜರಿದಿದ್ದಾರೆ.
ಕೇಂದ್ರದಿಂದ ಸಂಕುಚಿತ ರಾಜಕಾರಣ: ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಎನ್‌ಡಿಎ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಟಿಡಿಪಿ, ಜೆಡಿಯು ಆಡಳಿತದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿದೆ. ಕರ್ನಾಟಕ, ತೆಲಂಗಾಣ, ಪಂಜಾಬ್, ಕೇರಳ ಮತ್ತು ತಮಿಳುನಾಡಿನಂತಹ ವಿರೋಧ ಪಕ್ಷಗಳ ಆಳ್ವಿಕೆಯ ರಾಜ್ಯಗಳಿಗೆ ಅನುದಾನದಲ್ಲಿ ಪಕ್ಷಪಾತ ಧೋರಣೆ ತಾಳಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಮತ್ತು ಇತರ ತೆರಿಗೆಗಳ ಸಂಗ್ರಹದಲ್ಲಿ ಈ ರಾಜ್ಯಗಳು ಪಾಲು ಹೆಚ್ಚಿದೆ. ಕರ್ನಾಟಕ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶದಲ್ಲಿ ನೈಸರ್ಗಿಕ ವಿಕೋಪ ಉಂಟಾಗಿ, ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಪಕ್ಷ ರಾಜಕಾರಣ ಬದಿಗೊತ್ತಿ ಸಂಕಷ್ಟದಲ್ಲಿರುವ ರಾಜ್ಯಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.
ಒಕ್ಕೂಟ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆ. ಇದರ ವಿರುದ್ಧ ಕಾಂಗ್ರೆಸ್ ಸಂಸತ್ತಿನಲ್ಲಿ ಹೋರಾಡಲಿದೆ. ಇದಕ್ಕೆ ಉಳಿದ ವಿಪಕ್ಷಗಳು ಸಾಥ್ ನೀಡಲಿವೆ. ಸಂವಿಧಾನದ 38 ಮತ್ತು 39 ನೇ ವಿಧಿಯ ಹೇಳುವ ಫೆಡರಲ್ ತತ್ವವನ್ನು ಕೇಂದ್ರ ಸರ್ಕಾರ ಅನುಸರಿಸಬೇಕು ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿ ಪ್ರಸಾದ್ ಈಟಿವಿ ಭಾರತ್‌ಗೆ ತಿಳಿಸಿದರು.
ಇಂಡಿಯಾ ಕೂಟದ ಪ್ರಮುಖ ವಿಪಕ್ಷಗಳಾ ಎನ್‌ಸಿಪಿ (ಶರದ್ ಬಣ) ಶಿವಸೇನಾ (ಉದ್ಧವ್ ಬಣ), ಡಿಎಂಕೆ, ಟಿಎಂಸಿ, ಜೆಎಂಎಂ ಮತ್ತು ಆಪ್ ಪಕ್ಷಗಳು ಬಜೆಟ್ ಅನ್ನು "ಪಕ್ಷಪಾತ" ಎಂದು ಏಕ ಧ್ವನಿಯಲ್ಲಿ ಆರೋಪಿಸಿವೆ.
ಇದನ್ನೂ ಓದಿ: ಕೇಂದ್ರ ಬಜೆಟ್ನಲ್ಲಿ ತಾರತಮ್ಯ: ಸಂಸತ್ ಆವರಣದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ - INDIA bloc protest on budget