ಆಗ್ರಾ, ಉತ್ತರಪ್ರದೇಶ: ನೀರಿನ ತೊಟ್ಟಿಯಲ್ಲಿ ಕೈ ಕಾಲು ತೊಳೆಯುವ ಸಲುವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಭಾರಿ ಸಂಘರ್ಷಕ್ಕೆ ಕಾರಣವಾಗಿದೆ. ಇಲ್ಲಿನ ತಾಜನಗರಿಯ ಲೋಹಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಲಾ ಗೋಕುಲಪುರದಲ್ಲಿ ಕೈಕಾಲು ತೊಳೆಯುವ ವಿಚಾರದಲ್ಲಿ ಮಕ್ಕಳ ಮೇಲೆ ಕೈ ಮಾಡಿದ್ದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು, ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.
ಘಟನೆ ವೇಳೆ ಕೌನ್ಸಿಲರ್ ಗಂಡನ ಸಹೋದರನ ಅಂಗಡಿಗೆ ಬೆಂಕಿ ಹಚ್ಚಲಾಗಿದ್ದು, ಗುಂಡಿನ ದಾಳಿಯೂ ನಡೆದಿದೆ. ಸಫಾಯಿ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಬುಳ್ಳೆ ನರ್ವಾರ್ ಮತ್ತು ಅವರ ಮಗ ಸೇರಿದಂತೆ ಆರು ಜನರು ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ದುಷ್ಕರ್ಮಿಗಳು ಪರಾರಿಯಾಗುವ ಯತ್ನ ನಡೆಸಿದ್ದಾರೆ. ಈ ವೇಳೆ 6-7 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಏನಿದು ಗಲಾಟೆ?: ತಿಲಾ ಗೋಕುಲಪುರದಲ್ಲಿ ಪಾಲಿಕೆ ಸದಸ್ಯರ ನಿಧಿಯಿಂದ ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ಗುರುವಾರ ರಾತ್ರಿ 7:30ರ ಸುಮಾರಿಗೆ ಒಂದು ಗುಂಪಿನ 10 ರಿಂದ 12 ವರ್ಷದ 2-3 ಮಕ್ಕಳು ಕೈಕಾಲು ತೊಳೆಯುತ್ತಿದ್ದರು. ಈ ವೇಳೆ ಕೌನ್ಸಿಲರ್ ಪತಿ ರಾಜೇಶ್ ಪ್ರಜಾಪತಿ ಅವರ ಸಹೋದರ ವೀರೇಂದ್ರ ಕೈಕಾಲು ತೊಳೆಯುತ್ತಿದ್ದ ಮಕ್ಕಳನ್ನು ತಡೆದು ಥಳಿಸಿದ್ದಾರೆ. ಈ ವೇಳೆ ಜಾತಿ ನಿಂದನೆ ಮಾಡಿ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರ ತಿಳಿದು ಸಫಾಯಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷ ಬುಳ್ಳೆ ನರವಾರ, ಪ್ರಜಾಪತಿಯನ್ನು ಭೇಟಿ ಮಾಡಲು ಬಂದಾಗ ಮಾತಿನ ಚಕಮಕಿ ನಡೆದಿದೆ.
ಬುಳ್ಳೆ ನರವಾರ ಜನರ ಗುಂಪಿನ ಜೊತೆಗೆ ಪಿಸ್ತೂಲ್, ಕೋಲುಗಳು ಮತ್ತು ಕೊಡಲಿಗಳನ್ನು ಹಿಡಿದುಕೊಂಡು ಬಂದಿದ್ದಾರೆ. ಇಟ್ಟಿಗೆ, ಕಲ್ಲುಗಳನ್ನು ಎಸೆಯಲು ಪ್ರಾರಂಭಿದ್ದಾರೆ. ಈ ವೇಳೆ ಉಂಟಾದ ಕಲ್ಲು ತೂರಾಟದ ವೇಳೆ ಅಂಗಡಿಯ ಸಾಮಗ್ರಿಗಳಿಗೆ ಬೆಂಕಿ ಇಟ್ಟಿದ್ದು, ಸ್ಕೂಟರ್ ಅನ್ನು ಚರಂಡಿಗೆ ಎಸೆದಿದ್ದಾರೆ. ಕೆಲವರು ಇದೇ ವೇಳೆ ಗುಂಡಿನ ದಾಳಿಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಭಯಭೀತಿಗೊಂಡ ಜನರು ರಕ್ಷಣೆಗಾಗಿ ಮನೆ ಸೇರಿದ್ದು, ಪೊಲೀಸರು ಬಂದಾಕ್ಷಣ ಈ ಗುಂಪು ಓಡಿ ಹೋಗಿದೆ ಎಂದು ವೀರೇಂದ್ರ ಪ್ರಜಾಪತಿ ಆರೋಪಿಸಿದ್ದಾರೆ.
ಘಟನೆ ಬಗ್ಗೆ ಪೊಲೀಸರು ಹೇಳಿದ್ದಿಷ್ಟು: ಪ್ರಕರಣ ಕುರಿತು ಮಾತನಾಡಿರುವ ಡಿಸಿಪಿ ಸೂರಜ್ ರೈ, ರಾತ್ರಿಯೇ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಎರಡು ಗುಂಪುಗಳ ಆರರಿಂದ ಏಳು ಮಂದಿಯನ್ನ ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಗಲಾಟೆ ಮಾಡಿ, ಜೀಪಿನ ಮುಂದೆ ಪ್ರತಿಭಟನೆಗೆ ಕುಳಿತರು. ಮಹಿಳಾ ಗುಂಪನ್ನು ಸಮಾಧಾನ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಘಟನೆ ಸಂಬಂಧ ಎರಡೂ ಕಡೆಯವರು ಪರಸ್ಪರ ಆರೋಪ - ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗುಂಡಿನ ದಾಳಿಯಲ್ಲಿ ಪ್ರಜಾಪತಿ ಸಮಾಜದ ಲಕ್ಷ್ಮೀದೇವಿ ಅವರ ಕೈ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸಿಸಿಟಿವಿ ಧ್ವಂಸ ಮಾಡಿ ಗುಂಡಿನ ದಾಳಿ ನಡೆಸಲಾಗಿದೆ. ಮತ್ತೊಂದೆಡೆ ಕೊಡಲಿ, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಗಾಯಗೊಂಡ ಬುಳ್ಳು ಆರೋಪಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗುವುದು. ಉದ್ವಿಗ್ನತೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೈಸರ್‌ಗಂಜ್‌ನಲ್ಲಿ ಬ್ರಿಜ್ಭೂಷಣ್ ಸಿಂಗ್ ಪುತ್ರ, ರಾಯ್‌ಬರೇಲಿಯಲ್ಲಿ ದಿನೇಶ್ ಪ್ರತಾಪ್ ಸಿಂಗ್‌ಗೆ ಬಿಜೆಪಿ ಟಿಕೆಟ್