ನವದೆಹಲಿ: ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (National Cooperative Exports Ltd) (ಎನ್‌ಸಿಇಎಲ್) ಮೂಲಕ ಯುಎಇ ಮತ್ತು ಬಾಂಗ್ಲಾದೇಶಕ್ಕೆ 64,400 ಟನ್ ಈರುಳ್ಳಿ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್ಟಿ) ಹೊರಡಿಸಿದ ಅಧಿಸೂಚನೆಗಳಲ್ಲಿ ತಿಳಿಸಲಾಗಿದೆ. ಬಾಂಗ್ಲಾದೇಶಕ್ಕೆ 50,000 ಟನ್ ಮತ್ತು ಯುಎಇಗೆ 14,400 ಟನ್ ಈರುಳ್ಳಿ ರಫ್ತು ಮಾಡಲು ಅನುಮತಿ ನೀಡಲಾಗಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯೊಂದಿಗೆ ಸಮಾಲೋಚಿಸಿ ಎನ್‌ಸಿಇಎಲ್ ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತಿನ ಮಾರ್ಗಸೂಚಿಗಳನ್ನು ರೂಪಿಸುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಈರುಳ್ಳಿ ಬೆಲೆಗಳು ಸ್ಥಿರವಾಗಿರುವಂತೆ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಪರಿಸ್ಥಿತಿ ಕೈಮೀರಿ ಹೋಗದಂತೆ ನೋಡಿಕೊಳ್ಳುತ್ತಿದೆ. ರಫ್ತಿನಿಂದ ಬೆಲೆಗಳು ಹೆಚ್ಚಾಗುವುದನ್ನು ಸರ್ಕಾರ ಬಯಸುತ್ತಿಲ್ಲವಾದ್ದರಿಂದ ಇದಕ್ಕಾಗಿ ಕಠಿಣ ಮಾರ್ಗಸೂಚಿಗಳನ್ನು ಕೂಡ ರೂಪಿಸುತ್ತಿದೆ.
ಎನ್‌ಸಿಇಎಲ್ ಮೂಲಕ ಯುಎಇಗೆ 14,400 ಟನ್ ಈರುಳ್ಳಿ ರಫ್ತು ಮಾಡಲು ಅನುಮತಿ ನೀಡುವ ಅಧಿಸೂಚನೆಯು ಪ್ರತಿ ತ್ರೈಮಾಸಿಕಕ್ಕೆ 3,600 ಮೆಟ್ರಿಕ್ ಟನ್ ಪ್ರಮಾಣವನ್ನು ನಿಗದಿಪಡಿಸಿದೆ.
ಎನ್‌ಸಿಇಎಲ್ ಬಹು-ರಾಜ್ಯ ಸಹಕಾರಿ ಸೊಸೈಟಿಯಾಗಿದೆ. ಇದನ್ನು ದೇಶದ ಕೆಲವು ಪ್ರಮುಖ ಸಹಕಾರಿ ಸಂಘಗಳಾದ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್), ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ-ಆಪರೇಟಿವ್ ಲಿಮಿಟೆಡ್ (ಇಫ್ಕೊ), ಕೃಷಿಕ್ ಭಾರತಿ ಕೋ-ಆಪರೇಟಿವ್ ಲಿಮಿಟೆಡ್ (ಕ್ರಿಬ್ಕೊ) ಮತ್ತು ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ನಾಫೆಡ್) ಜಂಟಿಯಾಗಿ ನಿರ್ವಹಿಸುತ್ತಿವೆ.
ಈ ಹಿಂದೆ ಡಿಸೆಂಬರ್ 8, 2023ರಿಂದ ಜಾರಿಗೆ ಬರುವಂತೆ ಸರ್ಕಾರವು ಈರುಳ್ಳಿಯ ರಫ್ತು ನೀತಿಯನ್ನು ತಿದ್ದುಪಡಿ ಮಾಡಿ ಮಾರ್ಚ್ 31, 2024ರವರೆಗೆ ಈರುಳ್ಳಿಯನ್ನು 'ಮುಕ್ತ' ವರ್ಗದಿಂದ 'ನಿಷೇಧಿತ' ವರ್ಗಕ್ಕೆ ತಂದಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಗಳು ಏರಲು ಪ್ರಾರಂಭಿಸಿದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ಸ್ನೇಹಪರ ರಾಷ್ಟ್ರಗಳೊಂದಿಗಿನ ಬದ್ಧತೆಗಳನ್ನು ಪೂರೈಸಲು ಕೆಲ ದೇಶಗಳಿಗೆ ಈರುಳ್ಳಿ ರಫ್ತನ್ನು ಅನುಮತಿಸಲಾಗುತ್ತಿದೆ.
ಈ ಹಣಕಾಸು ವರ್ಷದ ಏಪ್ರಿಲ್ 1, 2023 ಮತ್ತು ಆಗಸ್ಟ್ 4, 2023ರ ನಡುವೆ, 9.75 ಲಕ್ಷ ಟನ್ ಈರುಳ್ಳಿಯನ್ನು ದೇಶದಿಂದ ರಫ್ತು ಮಾಡಲಾಗಿದೆ. ಮೌಲ್ಯದ ದೃಷ್ಟಿಯಿಂದ ಬಾಂಗ್ಲಾದೇಶ, ಮಲೇಷ್ಯಾ ಮತ್ತು ಯುಎಇ ಇವು ಭಾರತದಿಂದ ಈರುಳ್ಳಿ ತರಿಸಿಕೊಳ್ಳುವ ಅಗ್ರ ಮೂರು ದೇಶಗಳಾಗಿವೆ.
ಇದನ್ನೂ ಓದಿ : ಅಮೆಜಾನ್ ಪೇ, ಫೋನ್ಪೆಗೆ ಪೈಪೋಟಿ: UPI ಇಂಟರ್ಫೇಸ್ ಆರಂಭಿಸಿದ ಫ್ಲಿಪ್ಕಾರ್ಟ್