ನವದೆಹಲಿ/ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂಬ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಗರ ಆರೋಪವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಳ್ಳಿಹಾಕಿದ್ದಾರೆ.
ನೀತಿ ಆಯೋಗದ ಸಭೆಯಲ್ಲಿ ಆಯಾ ರಾಜ್ಯಗಳ ಪ್ರತಿ ಮುಖ್ಯಮಂತ್ರಿಗಳಿಗೆ ಮಾತನಾಡಲು ಸಮಯವನ್ನು ನಿಗದಿ ಮಾಡಲಾಗಿತ್ತು. ಅದರಂತೆಯೇ ಅವರು ಮಾತನಾಡಿದ್ದಾರೆ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ 'ಮೈಕ್ರೋಫೋನ್ ಸ್ವಿಚ್ ಆಫ್' ಆರೋಪ ಸುಳ್ಳು ಎಂದು ತಳ್ಳಿಹಾಕಿದ್ದಾರೆ.
ಮೈಕ್ ಅನ್ನು ಸ್ವಿಚ್ಡ್ ಆಫ್ ಮಾಡಲಾಯಿತು ಎಂದು ಮಮತಾ ಬ್ಯಾನರ್ಜಿ ಹೇಳಿರುವುದು ದುರದೃಷ್ಟಕರ ಮತ್ತು ಇದು ನಿಜವಲ್ಲ. ಅವರು ಈ ಸಭೆಯಲ್ಲಿ ಭಾಗವಹಿಸಿದ್ದು ಸಂತಸ ತಂದಿತ್ತು. ಆದರೆ, ಈ ರೀತಿಯ ಆರೋಪ ಮಾಡಿರುವುದು ಖೇದ ತಂದಿದೆ. ಅವರು ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಿದರು. ರಾಜ್ಯದ ಪರವಾಗಿ ಮತ್ತು ತಮ್ಮ ಆಕ್ಷೇಪಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲವನ್ನು ನಾವು ನಿಯಮಾವಳಿಗಳ ಪ್ರಕಾರ ಆಲಿಸಿದ್ದೇವೆ ಎಂದು ಸೀತಾರಾಮನ್ ತಿಳಿಸಿದರು.
ಸಮಯ ಮುಗಿದಾಗ ಈ ಬಗ್ಗೆ ಅವರಿಗೆ ಮಾತಿನ ನಡುವೆಯೇ ಸೂಚಿಸಲಾಗಿತ್ತು. ಇನ್ನೂ ಅವರ ವಾದ ಮಂಡನೆ ಮುಗಿದಿಲ್ಲವಾದಲ್ಲಿ ಬೇರೆ ಸಿಎಂಗಳಂತೆ ಹೆಚ್ಚಿನ ಸಮಯ ಕೋರಬೇಕಿತ್ತು. ಅದನ್ನು ಬಿಟ್ಟು ಅವರು ಸಭೆಯಿಂದ ಹೊರಬಂದು, ಮಾತನಾಡಲು ಅವಕಾಶ ನೀಡಿಲ್ಲ ಎಂದು ಆರೋಪ ಮಾಡಿರುವುದು ಸುಳ್ಳಿನ ಹೇಳಿಕೆಯಾಗಿದೆ. ಇದರ ಬದಲು ಸತ್ಯ ಹೇಳಬೇಕು ಎಂದು ಟೀಕಿಸಿದರು.
ಮಮತಾ ಆರೋಪವೇನು?: ದೆಹಲಿಯಲ್ಲಿ ನಡೆದ ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯಿಂದ ಅರ್ಧಕ್ಕೆ ಹೊರ ಬಂದ ಬಳಿಕ ಮಮತಾ ಬ್ಯಾನರ್ಜಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, ''ನಾನು ಮಾತನಾಡುವಾಗ ಮೈಕ್ ಆಫ್ ಮಾಡಲಾಗಿತ್ತು. ಹಾಗಾಗಿ ಅರ್ಧದಲ್ಲೇ ಸಭೆಯಿಂದ ಹೊರಬಂದೆ'' ಎಂದು ಆರೋಪ ಮಾಡಿದ್ದರು.
''ನನಗೆ ಐದು ನಿಮಿಷ ಕೂಡ ಮಾತನಾಡಲು ಅವಕಾಶ ನೀಡಲಿಲ್ಲ. ನಾನು ಮಾತನಾಡುತ್ತಿದ್ದ ನನ್ನ ಮೈಕ್ರೊಫೋನ್ ಸ್ವಿಚ್ ಆಫ್ ಮಾಡುವ ಮೂಲಕ ನನ್ನನ್ನು ಅವಮಾನಿಸಲಾಗಿದೆ'' ಎಂದು ಅವರು ಹೇಳಿದ್ದಾರೆ.
"ಸಭೆಯಲ್ಲಿ ಪ್ರತಿ ಪಕ್ಷದ ಏಕೈಕ ಪ್ರತಿನಿಧಿಯಾಗಿ ಭಾಗಿಯಾಗಿದ್ದೆ. ಕೆಲವು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುವ ಇಂಗಿತ ಇತ್ತು. ಆದರೆ, ನಾನು ಅದನ್ನು ಹೇಳುವ ಮೊದಲೇ ನನ್ನ ಮೈಕ್ರೊಫೋನ್ ನಿಲ್ಲಿಸಲಾಯಿತು. ಭವಿಷ್ಯದಲ್ಲಿ, ನಾನು ನೀತಿ ಆಯೋಗದ ಯಾವುದೇ ಸಭೆಗೆ ಹಾಜರಾಗುವುದಿಲ್ಲ" ಎಂದು ಮಮತಾ ಬ್ಯಾನರ್ಜಿ ಪ್ರತಿಜ್ಞೆ ಮಾಡಿದರು.