ಅಮರಾವತಿ (ಆಂಧ್ರಪ್ರದೇಶ): ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರು ಶೀಘ್ರದಲ್ಲೇ 21 ದಿನ ರಾಜ್ಯಾದ್ಯಂತ ಬಸ್ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ ಎಂದು ವೈಎಸ್‌ಆರ್‌ಸಿಪಿ ಪಕ್ಷ ತಿಳಿಸಿದೆ. ಮಾರ್ಚ್ 26 ಅಥವಾ 27 ರಂದು ಯಾತ್ರೆ ಆರಂಭವಾಗಲಿದ್ದು, ಎಲ್ಲ ಸಂಸತ್ ಕ್ಷೇತ್ರಗಳ ಮೂಲಕ ಹಾದು ಹೋಗಲಿದೆ. ಇದರ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇತ್ತೀಚಿಗೆ ಪಕ್ಷ ನಡೆಸಿದ ಸಿದ್ಧಂ (ಸಿದ್ಧ) ಸಭೆಗಳು ನಡೆದ ಜಿಲ್ಲೆಗಳಲ್ಲಿ ಈ ಯಾತ್ರೆ ಸಾಗಲಿದೆ ಎಂದು ತಿಳಿದು ಬಂದಿದೆ.
ಆಂಧ್ರಪ್ರದೇಶದಲ್ಲಿ ಮೇ 13 ರಂದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಿಗದಿಯಾಗಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಎರಡನೇ ಬಾರಿಗೆ ಅಧಿಕಾರ ಹಿಡಿಯಲು ತಯಾರಿ ನಡೆಸುತ್ತಿರುವ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ, ಲೋಕಸಭೆ ಚುನಾವಣೆಯಲ್ಲೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಿದ್ಧತೆ ನಡೆಸುತ್ತಿದೆ.
ಇದರ ಭಾಗವಾಗಿ ಸಿಎಂ ಜಗನ್ ಜನರನ್ನು ತಲುಪಲು ಚುನಾವಣೆಗೂ ಮೊದಲು 'ಬಸ್ ಯಾತ್ರೆ'ಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಬಸ್ ಪ್ರವಾಸದ ವೇಳೆ ಸಂವಾದ ಮತ್ತು ಸಾರ್ವಜನಿಕ ಸಭೆಗಳು ಇರಲಿವೆ. ಸಂವಾದದಲ್ಲಿ ಸರ್ಕಾರದ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಲು ಜನರಿಂದ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದು ಸಿಎಂಒ ಸೋಮವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ವೈಎಸ್‌ಆರ್‌ಸಿಪಿ ನಾಯಕರೊಬ್ಬರ ಪ್ರಕಾರ, ಸಿಎಂ ಜಗನ್ ಅವರು ಪ್ರವಾಸ ಮಾಡುವ ಸ್ಥಳಗಳಲ್ಲಿ ಜನರೊಂದಿಗೆ ಹೆಚ್ಚು ಸಮಯ ಕಳೆಯಲಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಅವರು ಮತದಾರರ ಜೊತೆ ಹೆಚ್ಚಿನ ಒಡನಾಟ ಹೊಂದಲು ಬಯಸಿದ್ದಾರೆ. ಪಕ್ಷವು ಎಲ್ಲ ಪ್ರದೇಶಗಳಲ್ಲಿ ಸಭೆಗಳನ್ನು ಆಯೋಜಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ದೂರು: ಪ್ರಜಾ ಸಭೆಯಲ್ಲಿ ಭದ್ರತಾ ವೈಫಲ್ಯ ಉಂಟಾಗಿದ್ದರ ವಿರುದ್ಧ ಎನ್‌ಡಿಎ ಭಾಗವಾಗಿರುವ ಟಿಡಿಪಿ ಮತ್ತು ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿವೆ. ಪಲ್ನಾಡು ಜಿಲ್ಲೆಯಲ್ಲಿ ನಡೆದ ಸಭೆಯಲ್ಲಿ ಪೊಲೀಸರು ಬೇಕಂತಲೇ ಸೂಕ್ತ ಭದ್ರತೆ ನೀಡಿಲ್ಲ ಎಂದು ಎನ್‌ಡಿಎ ನಾಯಕರು ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್‌ಡಿಎ ಕೂಟದ ಸಭೆ ನಡೆಸಲು ಪೊಲೀಸರು ಸಹಕರಿಸಲಿಲ್ಲ. ಅವರ ನಿರ್ಲಕ್ಷ್ಯದಿಂದಾಗಿಯೇ ವಾಹನ ದಟ್ಟಣೆ ಉಂಟಾಗಿ ಜನರು ಪರದಾಡುವಂತಾಯಿತು ಎಂದು ಮೈತ್ರಿ ಪಕ್ಷಗಳ ಮುಖಂಡರಾದ ವರ್ಲ ರಾಮಯ್ಯ, ಪಾತೂರಿ ನಾಗಭೂಷಣಂ, ಬಿ.ರಾಮಕೃಷ್ಣ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮುಖೇಶ್‌ಕುಮಾರ್ ಮೀನಾ ಅವರಿಗೆ ದೂರು ಸಲ್ಲಿಸಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪಲ್ನಾಡು ಎಸ್ಪಿ ರವಿಶಂಕರ್ ರೆಡ್ಡಿ ಅವರಿಗೂ ಆಗ್ರಹಿಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಸುಳ್ಳುಗಳೇ ಕಾಂಗ್ರೆಸ್ ಪಕ್ಷದ ಬಂಡವಾಳ; ಪ್ರಧಾನಿ ಮೋದಿ ಟೀಕಾಪ್ರಹಾರ, ಈಶ್ವರಪ್ಪ ಗೈರು