ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ದೆಹಲಿ ಸಿಎಂ ಕೇಜ್ರಿವಾಲ್ ಅವರ ಆರೋಗ್ಯದ ಬಗ್ಗೆ ಆಪ್ ಮತ್ತು ಜೈಲು ಆಡಳಿತದ ನಡುವಿನ ತಿಕ್ಕಾಟ ಮುಂದುವರೆದಿದೆ. ಮಧುಮೇಹದಿಂದ ಬಳಲುತ್ತಿರುವ ಕೇಜ್ರಿವಾಲ್‌ಗೆ ಇನ್ಸುಲಿನ್ ನೀಡಲಾಗುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿತ್ತು. ಇದಕ್ಕೆ ತಿಹಾರ್ ಜೈಲು ಆಡಳಿತ ಮಂಡಳಿ ಪ್ರತ್ಯುತ್ತರ ನೀಡಿದೆ.
ಏಮ್ಸ್ ವೈದ್ಯರೊಂದಿಗೆ ನಾವು (ಆಡಳಿತ ಮಂಡಳಿ) ಕೇಜ್ರಿವಾಲ್ ಅವರ ವಿಡಿಯೋ ಕಾನ್ಫರೆನ್ಸಿಂಗ್ ಆಯೋಜಿಸಿದ್ದು, ಸಂವಾದ ನಡೆಸುವ ವೇಳೆ ಕೇಜ್ರಿವಾಲ್ ಅವರು ಇನ್ಸುಲಿನ್ ಅಗತ್ಯತೆಯ ಬಗ್ಗೆ ವೈದ್ಯರ ಮುಂದೆ ಚರ್ಚಿಸಿಲ್ಲ, ಜತೆಗೆ ಇನ್ಸುಲಿನ್ ನೀಡುವಂತೆ ಸೂಚಿಸಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.
ಶನಿವಾರ ನಡೆದಿದ್ದ ವಿಡಿಯೋ ಕಾನ್ಫರೆನ್ಸಿಂಗ್: ತಿಹಾರ್ ಜೈಲು ಆಡಳಿತದ ಹೇಳಿರುವ ಪ್ರಕಾರ, ಅರವಿಂದ್ ಕೇಜ್ರಿವಾಲ್ ಅವರಿಗೆ ಶನಿವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವೈದ್ಯರೊಂದಿಗಿನ ಸಂವಾದ ನಡೆಸಲಾಗಿತ್ತು. ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆದಿದೆ. ಸಿಎಂ ಆರೋಗ್ಯದಲ್ಲಿ ಯಾವುದೇ ಗಂಭೀರ ಆತಂಕವಿಲ್ಲ ಎಂದು ವೈದ್ಯರು ಹೇಳಿದ್ದು, ಈಗಾಗಲೇ ಸೂಚಿಸಿದ ಔಷಧಗಳನ್ನು ಮುಂದುವರಿಸುವಂತೆ ಸೂಚಿಸಲಾಗಿದೆ.
ಕೇಜ್ರಿವಾಲ್ ಪತ್ನಿ ಮನವಿಗೆ ಸ್ಪಂದನೆ: ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಪತಿ ಆರೋಗ್ಯದ ಬಗ್ಗೆ ವಿಚಾರಿಸುವಂತೆ ಕೋರಿದ್ದರು. ಈ ಮೇರೆಗೆ ತಿಹಾರ್ ಜೈಲು ಆಡಳಿತ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಿತ್ತು. ಏಮ್ಸ್‌ನ ತಜ್ಞ ವೈದ್ಯರಿಗೆ ಗ್ಲೂಕೋಸ್ ಮಾನಿಟರಿಂಗ್ ಸೆನ್ಸಾರ್‌ನ ದಾಖಲೆಗಳು ಮತ್ತು ಕೇಜ್ರಿವಾಲ್‌ಗೆ ನೀಡುತ್ತಿರುವ ಆಹಾರದ ಬಗ್ಗೆ ವಿವರವಾಗಿ ತಿಳಿಸಲಾಗಿದೆ ಎಂದು ತಿಹಾರ ಜೈಲು ಆಡಳಿತ ತಿಳಿಸಿದೆ.
ಜೈಲು ಆಡಳಿತದಿಂದ ಎಲ್‌ಜಿಗೆ ವರದಿ: 2 ದಿನಗಳ ಹಿಂದೆ ತಿಹಾರ್ ಜೈಲು ಆಡಳಿತವು ಸಿಎಂ ಕೇಜ್ರಿವಾಲ್ ಅವರ ಆರೋಗ್ಯ ವರದಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಹಸ್ತಾಂತರಿಸಿತ್ತು. ಇದರಲ್ಲಿ ಕೇಜ್ರಿವಾಲ್ ಬಹಳ ದಿನಗಳಿಂದ ಇನ್ಸುಲಿನ್ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಲಾಗಿತ್ತು. ಇದಾದ ಬಳಿಕ ಆಮ್ ಆದ್ಮಿ ಪಕ್ಷವು ಈ ವರದಿಯನ್ನು ತಿರಸ್ಕರಿಸಿ, ಕೇಜ್ರಿವಾಲ್ ಅವರನ್ನು ಜೈಲಿನಲ್ಲಿ ಹತ್ಯೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿತ್ತು. ಇದು ವಾದ - ಪ್ರತಿವಾದ ಹಾಗೂ ವಿವಾದಕ್ಕೆ ಕಾರಣವಾಗಿದೆ. ಎರಡೂ ಪಕ್ಷಗಳ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ಜೈಲಿನಲ್ಲಿ ಕೇಜ್ರಿವಾಲ್ ಹತ್ಯೆ ಸಂಚು- ಆಪ್ ಆರೋಪ; ದೆಹಲಿ ಸಿಎಂ ಆರೋಗ್ಯ ಚೆನ್ನಾಗಿದೆ-ಜೈಲಧಿಕಾರಿಗಳು - CM Aravind Kejriwal