ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್ ಅವರ ಅಧಿಕಾರದ ಅವಧಿ ಮುಗಿಯುತ್ತ ಬಂದಿರುವ ಬೆನ್ನಲ್ಲೆ ತಮ್ಮ ಉತ್ತಾರಾಧಿಕಾರಿಯಾಗಿ, ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಅವರ ಹೆಸರನ್ನು ಔಪಚಾರಿಕವಾಗಿ ಪ್ರಸ್ತಾಪಿಸಿದ್ದಾರೆ.
ಚಂದ್ರಚೂಡ್ ಅವರ ಅಧಿಕಾರ ಅವಧಿ ನವೆಂಬರ್ 10ಕ್ಕೆ ಮುಗಿಯುತ್ತಿದ್ದು, ಈ ಹಿನ್ನಲೆ ತಮ್ಮ ನಂತರದ ಈ ಹುದ್ದೆಗೆ ಯಾರು ಎಂಬ ಕುರಿತು ಕೇಂದ್ರ ಸರ್ಕಾರಕ್ಕೆ ಖನ್ನಾ ಹೆಸರನ್ನು ಶಿಫಾರಸು ಮಾಡಿದ್ದಾರೆ.
ಸರ್ಕಾರದ ಅನುಮತಿ ಬಳಿಕ ನ್ಯಾಯಮೂರ್ತಿ ಖನ್ನಾ ಅವರು ಭಾರತದ 51ನೇ ಮುಖ್ಯ ನ್ಯಾಯಾಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಅಧಿಕಾರ ಅವಧಿ ಆರು ತಿಂಗಳು ಕಾಲ ಇರಲಿದ್ದು, 2025ರ ಮೇ 13ಕ್ಕೆ ಅವರು ತಮ್ಮ ಹುದ್ದೆಯಿಂದ ನಿವೃತ್ತಿಗೊಳ್ಳಲಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿಗಳು ತಮ್ಮ ನಿವೃತ್ತಿಗೂ ಮುನ್ನ ತಮ್ಮ ನಂತರದ ಸ್ಥಾನದಲ್ಲಿ ಯಾರು ಉತ್ತರಾಧಿಕಾರಿಯಾಗಿ ಇರಲಿದ್ದಾರೆ ಎಂಬ ಕುರಿತು ಕೇಂದ್ರಕ್ಕೆ ಔಪಚಾರಿಕವಾಗಿ ಪತ್ರ ಬರೆಯುವುದು ವಾಡಿಕೆಯಾಗಿದೆ. ಈ ಶಿಫಾರಸನ್ನು ಕೇಂದ್ರ ಸರ್ಕಾರ ಸಹಜವಾಗಿಯೇ ಅನುಮೋದಿಸುತ್ತದೆ.
2022ರ ನವೆಂಬರ್ 2ರಂದು ಸಿಜೆಐ ಆಗಿ ನೇಮಕಗೊಂಡಿರುವ ನ್ಯಾ ಚಂದ್ರಚೂಡ್ 65ವರ್ಷಗಳನ್ನು ದಾಟುವ ಹಿನ್ನೆಲೆಯಲ್ಲಿ ಇದೇ ನವೆಂಬರ್ನಲ್ಲಿ ನಿವೃತ್ತಿಯಾಗುತ್ತಿದ್ದಾರೆ.
ನ್ಯಾ ಖನ್ನಾ ಬಗ್ಗೆ ಒಂದಿಷ್ಟು ಮಾಹಿತಿ: 1960ರ ಮೇ 14ರಂದು ಜನಿಸಿದ ನ್ಯಾ. ಖನ್ನಾ, 1983ರಲ್ಲಿ ದೆಹಲಿಯ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿದ್ದರು. ಆರಂಭದಲ್ಲಿ ತಿಸ್ ಹಜಾರಿ ಕಾಂಪ್ಲೆಕ್ಸ್ನ ಜಿಲ್ಲಾ ನ್ಯಾಯಾಲಯದಲ್ಲಿ ಅವರು ವಕೀಲಿಕೆ ಆರಂಭಿಸಿದ್ದರು. ಬಳಿಕ ದೆಹಲಿ ಹೈ ಕೋರ್ಟ್ ಮತ್ತು ಟ್ರಿಬ್ಯೂನಲ್ನಲ್ಲಿ ಕಾರ್ಯ ಆರಂಭಿಸಿದರು.
2005 ರಲ್ಲಿ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಉನ್ನತೀಕರಿಸಲ್ಪಟ್ಟರು ಮತ್ತು 2006 ರಲ್ಲಿ ಕಾಯಂ ನ್ಯಾಯಮೂರ್ತಿಗಳಾಗಿ ನಿಯೋಜಿಸಲ್ಪಟ್ಟರು. 2019ರ ಜನವರಿ 18 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದರು.
ನ್ಯಾ ಚಂದ್ರಚೂಡ್ ಸಾಧನೆಯ ಹಾದಿ : ಧನಂಜಯ ಯಶವಂತ ಚಂದ್ರಚೂಡ್ ಅವರು, 11 ನವೆಂಬರ್ 1959 ರಂದು ಜನಿಸಿದ್ದು, ದೆಹಲಿ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಆರಂಭಿಸಿದ ಅವರು, ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೇ 2016ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. 2013 ರಿಂದ 2016 ರವರೆಗೆ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಮತ್ತು 2000 ರಿಂದ 2013 ರವರೆಗೆ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದರು.
ಚುನಾವಣಾ ಬಾಂಡ್ ಯೋಜನೆ ತೀರ್ಪು, ರಾಮಜನ್ಮಭೂಮಿ ತೀರ್ಪು, ಶಬರಿಮಲೆ ಪ್ರಕರಣ, ಸಲಿಂಗ ವಿವಾಹ ಪ್ರಕರಣ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ರದ್ದತಿಯಂತಹ ಮಹತ್ವದ ತೀರ್ಪುಗಳನ್ನು ನೀಡಿದ ಪೀಠಗಳಲ್ಲಿ ಚಂದ್ರಚೂಡ್ ಭಾಗವಾಗಿದ್ದರು.
ಇದನ್ನೂ ಓದಿ: ಎಚ್ಚರ.. ಎಚ್ಚರ..: ನೀರಿನ ಬಿಕ್ಕಟ್ಟಿನಿಂದ ಜಾಗತಿಕ ಆಹಾರ ಉತ್ಪಾದನೆ ಮೇಲೆ ಭಾರಿ ಅಪಾಯ: ವರದಿ