ರಾಂಚಿ (ಜಾರ್ಖಂಡ್): ತೀವ್ರ ಕುತೂಹಲ ಕೆರಳಿಸಿದ್ದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿಶ್ವಾಸಮತ ಗೆದ್ದಿದ್ದಾರೆ. ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ಸೊರೇನ್ ಸರ್ಕಾರವು ನಿರೀಕ್ಷೆಯಂತೆ ವಿಶ್ವಾಸಮತ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದೆ.
ಸದನದಲ್ಲಿ ವಿಶ್ವಾಸಮತ ಯಾಚನೆಯ ಮೇಲಿನ ಚರ್ಚೆ ಬಳಿಕ ಮತದಾನ ನಡೆಯಿತು. ಮತದಾನದ ವೇಳೆಯೂ ನಿರಂತರ ಗದ್ದಲ ಉಂಟಾಯಿತು. ಕೋಲಾಹಲದ ನಡುವೆಯೇ ಮತ ಎಣಿಕೆ ಕಾರ್ಯ ನಡೆಯಿತು. ಇದೇ ವೇಳೆ ಎನ್‌ಡಿಎ ಶಾಸಕರು ಸದನದಿಂದ ಹೊರ ನಡೆದರು. ಇದರಿಂದಾಗಿ ಪ್ರಸ್ತಾಪದ ವಿರುದ್ಧ ಒಂದೇ ಒಂದು ಮತವೂ ಚಲಾವಣೆಯಾಗಲಿಲ್ಲ. ಸ್ವತಂತ್ರ ಶಾಸಕಿ ಸರಯೂ ರೈ ತಟಸ್ಥರಾಗಿದ್ದರು. ಮತದಾನದ ನಂತರ ವಿಧಾನಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ವಿಶ್ವಾಸಮತ ಗೆದ್ದ ಬಳಿಕ ಮಾತನಾಡಿದ ಸಿಎಂ ಹೇಮಂತ್ ಸೊರೇನ್, ರಾಜ್ಯದ ಜನತೆ ವಿರೋಧಿಗಳಿಗೆ (ಬಿಜೆಪಿ) ತಕ್ಕ ಪಾಠ ಕಲಿಸಲಿದ್ದಾರೆ. ಮುಂಬರುವ ಚುನಾವಣೆಯಲ್ಲಿಯೂ ತಕ್ಕ ಪಾಠ ಕಲಿಸಲಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆ ಎಚ್ಚರಿಕೆ ನೀಡಿದ್ದಾರೆ. ಅವರಿಗೆ (ಬಿಜೆಪಿ) ಉತ್ತರ ನೀಡಲು ಸಮಯವಿದೆ. 2019 ರಿಂದ ನಾವು ಸಾಂವಿಧಾನಿಕ ಕಾರ್ಯವಿಧಾನಗಳನ್ನು ಅನುಸರಿಸುತ್ತಾ ಬಂದಿದ್ದೇವೆ. ಆಡಳಿತ ಪಕ್ಷದ ಶಕ್ತಿ ಮತ್ತು ಸಾಮರ್ಥ್ಯವನ್ನು ನೋಡಿದ್ದೀರಿ. ಅದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ಒಟ್ಟು 81 ಸಂಖ್ಯಾಬಲ ಹೊಂದಿರುವ ರಾಜ್ಯ ವಿಧಾನಸಭೆಯಲ್ಲಿ ಹೇಮಂತ್ ಸೊರೇನ್ ಅವರ ಪರವಾಗಿ 45 ಶಾಸಕರ ಮತಗಳೊಂದಿಗೆ ವಿಶ್ವಾಸ ಮತ ಗೆದ್ದರು. ಅವರು ಜುಲೈ 4 ರಂದು ರಾಂಚಿಯ ರಾಜಭವನದಲ್ಲಿ ಜಾರ್ಖಂಡ್‌ನ 13ನೇ ಮುಖ್ಯಮಂತ್ರಿಯಾಗಿ, ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು.
ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್‌ನ ಹೈಕೋರ್ಟ್ ಜಾಮೀನು ನೀಡಿದ ನಂತರ, ಜೂನ್ 28 ರಂದು ಹೇಮಂತ್ ಜೈಲಿನಿಂದ ಬಿಡುಗಡೆಯಾಗಿದ್ದರು. ಜನವರಿ 31ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸುವ ಮುನ್ನವೇ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
#WATCH | Ranchi: After winning the Floor test, Jharkhand CM Hemant Soren says, " ...since 2019, we have been continuously following constitutional procedures and today again you all got to see the strength and power of the ruling party. on my behalf, i thank the speaker and all… pic.twitter.com/ZSsp2bIPVV
— ANI (@ANI) July 8, 2024
ಭೂ ಹಗರಣ ಮತ್ತು ಮನಿ ಲಾಂಡರಿಂಗ್ ಆರೋಪದ ಮೇಲೆ ಜನವರಿಯಲ್ಲಿ ಜಾರಿ ನಿರ್ದೇಶನಾಲಯ (ED) ಅವರನ್ನು ಬಂಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಐದು ತಿಂಗಳ ಕಾಲ ಜೈಲು ವಾಸ ಅನುಭವಿಸಿ ಅವರು ಬಿಡುಗಡೆಯಾಗಿದ್ದಾರೆ.
ಈ ನಡುವೆ ಹೇಮಂತ್ ಬಂಧನದಿಂದ ಫೆಬ್ರವರಿ 2 ರಂದು ಜಾರ್ಖಂಡ್‌ನ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಚಂಪೈ ಸೊರೇನ್, ಬುಧವಾರ ರಾಜಭವನದಲ್ಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ಜೆಎಂಎಂ ಕಾರ್ಯಾಧ್ಯಕ್ಷರ ಸಮ್ಮುಖದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಇದನ್ನೂ ಓದಿ: ರಷ್ಯಾಗೆ ಪ್ರಯಾಣ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿ - PM Modi Russia Visit