ಚೆನ್ನೈ: ಕಳೆದ ಎರಡು ತಿಂಗಳಲ್ಲಿ ಶ್ರೀಲಂಕಾದಿಂದ 167 ಕೋಟಿ ರೂಪಾಯಿ ಮೌಲ್ಯದ 267 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಸಿಂಡಿಕೇಟ್ ಅನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ಭೇದಿಸಿದೆ. ಗುಪ್ತಚರ ಮಾಹಿತಿಯನ್ನು ಆಧರಿಸಿ, ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ ಅಂಗಡಿಯೊಂದರ ಮಾಲೀಕ ಹಾಗೂ ಆತನ ಓರ್ವ ಸಿಬ್ಬಂದಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಬಗ್ಗೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಧಾನ ಆಯುಕ್ತ ಆರ್.ಶ್ರೀನಿವಾಸ ನಾಯಕ್ ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿರುವ ಏರ್ಹಬ್ ಹೆಸರಿನ ಅಂಗಡಿಯ ಮಾರಾಟ ಪ್ರತಿನಿಧಿಯೊಬ್ಬನನ್ನು ಶಂಕಾಸ್ಪದ ಚಲನವಲನೆಯ ಕಾರಣದಿಂದ ಬಂಧಿಸಿ ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆತ ತನ್ನ ಮೈಯಲ್ಲಿ ಅಡಗಿಸಿಟ್ಟುಕೊಂಡಿದ್ದ ಮೂರು ಕಟ್ಟು ಚಿನ್ನ ಪತ್ತೆಯಾಗಿತ್ತು. ಶ್ರೀಲಂಕಾದಿಂದ ನಿಲ್ದಾಣದಲ್ಲಿ ಇಳಿದಿದ್ದ ಟ್ರಾನ್ಸಿಟ್ ಪ್ರಯಾಣಿಕನೊಬ್ಬನಿಂದ ಆತ ಈ ಚಿನ್ನವನ್ನು ಪಡೆದು ಅಡಗಿಸಿಟ್ಟುಕೊಂಡಿದ್ದ ಎಂದು ಆರ್.ಶ್ರೀನಿವಾಸ ನಾಯಕ್ ತಿಳಿಸಿದರು.
ಶ್ರೀಲಂಕಾ ಮೂಲದ ಕಳ್ಳಸಾಗಣೆದಾರರು ಏರ್ಹಬ್ ಅಂಗಡಿಯನ್ನು ಬಾಡಿಗೆಗೆ ಪಡೆದಿದ್ದರು ಮತ್ತು ಟ್ರಾನ್ಸಿಟ್ ಪ್ರಯಾಣಿಕರು ತರುವ ಚಿನ್ನವನ್ನು ಪಡೆಯಲು ಎಂಟು ಜನರನ್ನು ನೇಮಕ ಮಾಡಿದ್ದರು ಎಂಬುದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ.
ಈ ವ್ಯಕ್ತಿಗಳು, ಟ್ರಾನ್ಸಿಟ್ ಪ್ರಯಾಣಿಕರಿಂದ ಚಿನ್ನವನ್ನು ಪಡೆದ ನಂತರ, ಅದನ್ನು ತಮ್ಮ ದೇಹದಲ್ಲಿ ಅಡಗಿಸಿ ವಿಮಾನ ನಿಲ್ದಾಣದಿಂದ ಹೊರಗೆ ಕಳ್ಳಸಾಗಣೆ ಮಾಡುತ್ತಿದ್ದರು. ಈ ಕಾರ್ಯವಿಧಾನದ ಅಡಿಯಲ್ಲಿ, ಅವರು ಎರಡು ತಿಂಗಳ ಅವಧಿಯಲ್ಲಿ 167 ಕೋಟಿ ರೂ.ಗಳ ಮೌಲ್ಯದ 267 ಕೆಜಿ ಚಿನ್ನವನ್ನು ಯಶಸ್ವಿಯಾಗಿ ಕಳ್ಳಸಾಗಣೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಚಿನ್ನವನ್ನು ಹಸ್ತಾಂತರಿಸಿದ ಶ್ರೀಲಂಕಾ ಪ್ರಜೆ, ಏರ್ಹಬ್ ಅಂಗಡಿಯ ಮಾಲೀಕ ಮತ್ತು ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಇನ್ವಾಯ್ಸ್ ಇಲ್ಲದೆ ಚಿನ್ನ ತರುವುದು ಕಳ್ಳಸಾಗಣೆ: ಇನ್ವಾಯ್ಸ್ ಮತ್ತು ದಾಖಲೆಗಳಿಲ್ಲದೆ ಯಾವುದೇ ರೂಪದಲ್ಲಿ ವಿದೇಶದಿಂದ ದೇಶಕ್ಕೆ ಭಾರಿ ಪ್ರಮಾಣದ ಚಿನ್ನವನ್ನು ತರುವುದು ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 2 (33) ರ ಅಡಿಯಲ್ಲಿ "ನಿಷೇಧಿತ ಸರಕುಗಳ" ವ್ಯಾಖ್ಯಾನದ ಅಡಿಯಲ್ಲಿ ಬರುತ್ತದೆ ಎಂದು ತೆಲಂಗಾಣ ಹೈಕೋರ್ಟ್ ಸ್ಪಷ್ಟಪಡಿಸಿದೆ. ಇಂಥ ಕೃತ್ಯಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಆ ಚಿನ್ನವನ್ನು ತಂದ ದೇಶಕ್ಕೆ ಅದನ್ನು ಮರು ರಫ್ತು ಮಾಡುವಂತೆ ಕೇಳಲು ಸಾಧ್ಯವಿಲ್ಲ ಮತ್ತು ಕಸ್ಟಮ್ಸ್ ಇಲಾಖೆಯಿಂದ ವಶಪಡಿಸಿಕೊಂಡ ನಂತರ ಅಂತಹ ಚಿನ್ನವನ್ನು ಯಾವುದೇ ರೂಪದಲ್ಲಿ ವಿಲೇವಾರಿ ಮಾಡುವುದನ್ನು ಅವರು ಪ್ರಶ್ನಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಇಬ್ಬರು ಮಕ್ಕಳ ಅಪಹರಣ: ಸಿನಿಮೀಯ ರೀತಿಯಲ್ಲಿ ಕಾರು ಚೇಸ್ ಮಾಡಿ ಆರೋಪಿ ಹಿಡಿದ ಪೊಲೀಸರು - DELHI KIDNAP CASE