ನವದದೆಹಲಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಪೌರತ್ವ ನೀಡುವ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಇಂದು ಸಂಜೆ ಜಾರಿಗೊಳಿಸಿ ಆದೇಶ ಹೊರಡಿಸಿದೆ.
ಸಂಸತ್ತಿನಲ್ಲಿ ಮಸೂದೆ ಅಂಗೀಕಾರಗೊಂಡ ನಾಲ್ಕು ವರ್ಷಗಳ ಬಳಿಕ ಹಾಗೂ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಕಾಯ್ದೆ ಜಾರಿಗೊಳಿಸಲು ಅಧಿಸೂಚನೆ ಹೊರಡಿಸಿದೆ. ಸಿಎಎ ಜಾರಿಗೊಳಿಸಲು ಆದೇಶ ಹೊರಡಿಸಿರುವ ಮೋದಿ ಸರ್ಕಾರ, 2014ರ ಡಿಸೆಂಬರ್ 31ರವೆರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರು, ಅಂದರೆ ಹಿಂದೂಗಳು, ಸಿಖ್, ಜೈನರು, ಬೌದ್ಧರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನರಿಗೆ ಭಾರತೀಯ ರಾಷ್ಟ್ರೀಯತೆ ನೀಡಲು ಪ್ರಾರಂಭಿಸಲಿದೆ.
ಸಿಎಎ 2019, ಅರ್ಹರಾಗಿರುವ ವ್ಯಕ್ತಿಗಳಿಗೆ ಭಾರತೀಯ ಪೌರತ್ವವನ್ನು ಪಡೆಯಲು ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮಸೂದೆಗೆ ಸಂಸತ್ತಿನಲ್ಲಿ ಅಂಗೀಕಾರ ದೊರೆತಿತ್ತು. ಆದರೆ, ಅದರ ವಿರುದ್ಧ ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ನಡೆದ ಕಾರಣ ಅದು ಜಾರಿಗೆ ಬಂದಿರಲಿಲ್ಲ. ಕಳೆದ ವರ್ಷ ಡಿಸೆಂಬರ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಇದು ದೇಶದ ಕಾನೂನಾಗಿದ್ದು, ಸಿಎಎ ಅನುಷ್ಠಾನವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಲೋಕಸಭೆಗೂ ಮುನ್ನ ಸಿಎಎ ಜಾರಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಘೋಷಿಸಿದ್ದರು.
ಇದನ್ನೂ ಓದಿ: 'ಮಿಷನ್ ದಿವ್ಯಾಸ್ತ್ರ' ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ: ಡಿಆರ್ಡಿಒಗೆ ಪ್ರಧಾನಿ ಮೋದಿ ಶ್ಲಾಘನೆ
ಏನು ಹೇಳುತ್ತದೆ ಈ ಕಾನೂನು: ಗೃಹ ವ್ಯವಹಾರಗಳ ಸಚಿವಾಲಯವು ಅರ್ಜಿದಾರರ ಅನುಕೂಲಕ್ಕಾಗಿ ಪೋರ್ಟಲ್ವೊಂದನ್ನು ಸಿದ್ಧಪಡಿಸಿದೆ. ನೋಂದಣಿ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ನಲ್ಲೇ ಮಾಡಬೇಕಾಗುತ್ತದೆ. ಅರ್ಜಿದಾರರು ಪ್ರಯಾಣ ದಾಖಲೆಗಳಿಲ್ಲದೇ ಭಾರತವನ್ನು ಪ್ರವೇಶಿಸಿದ ವರ್ಷವನ್ನು ಘೋಷಿಸಬೇಕಾಗುತ್ತದೆ. ಆದರೆ, ಅರ್ಜಿದಾರರಿಂದ ಯಾವುದೇ ದಾಖಲೆಗಳನ್ನು ಕೇಳಲಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಸೆಂಬರ್ 27, 2023 ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಎ ಅನುಷ್ಠಾನವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಕೋಲ್ಕತ್ತಾದಲ್ಲಿ ಪಕ್ಷದ ಸಭೆ ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಸಿಎಎ ಜಾರಿಗೊಳಿಸುವುದು ಬಿಜೆಪಿಯ ಬದ್ಧತೆಯಾಗಿದೆ ಎಂದು ಘೋಷಿಸಿದ್ದರು. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮೊದಲಿನಿಂದಲೂ ಸಿಎಎ ವಿರೋಧಿಸುತ್ತಾ ಬಂದಿದೆ. ಆದರೆ, ಬಿಜೆಪಿ ವಿವಾದಾತ್ಮಕ ಸಿಎಎ ಜಾರಿಗೆ ತರುವ ಭರವಸೆ ನೀಡಿದೆ. ಕಳೆದ ಲೋಕಸಭಾ ಚುನಾವಣೆ ವೇಳೆಯೇ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ತನ್ನ ಪ್ರಮುಖ ಚುನಾವಣಾ ಘೋಷಣೆಯಾಗಿ ಮಾಡಿಕೊಂಡಿತ್ತು.
ಕಳೆದ ಎರಡು ವರ್ಷಗಳಲ್ಲಿ, ಪೌರತ್ವ ಕಾಯಿದೆ, 1955 ರ ಅಡಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬರುವ ಹಿಂದೂಗಳು, ಸಿಖ್‌ಗಳು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡಲು ಒಂಬತ್ತು ರಾಜ್ಯಗಳ 30 ಕ್ಕೂ ಹೆಚ್ಚು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಗೃಹ ಕಾರ್ಯದರ್ಶಿಗಳಿಗೆ ಅಧಿಕಾರ ನೀಡಲಾಗಿದೆ.
2021-22ರ ಗೃಹ ವ್ಯವಹಾರಗಳ ಸಚಿವಾಲಯದ ವಾರ್ಷಿಕ ವರದಿಯ ಪ್ರಕಾರ, ಏಪ್ರಿಲ್ 1, 2021 ರಿಂದ ಡಿಸೆಂಬರ್ 31, 2021 ರವರೆಗೆ, ಮೂರು ದೇಶಗಳ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಒಟ್ಟು 1,414 ವಿದೇಶಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಪೌರತ್ವ ಕಾಯ್ದೆ, 1955 ರ ಅಡಿ ನೋಂದಣಿ ಮೂಲಕ ಭಾರತೀಯ ಪೌರತ್ವವನ್ನು ನೀಡುವ ಒಂಬತ್ತು ರಾಜ್ಯಗಳೆಂದರೆ ಗುಜರಾತ್, ರಾಜಸ್ಥಾನ, ಛತ್ತೀಸ್‌ಗಢ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರಗಳಾಗಿವೆ. ಆದರೆ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಯಾವುದೇ ಜಿಲ್ಲೆಗಳ ಅಧಿಕಾರಿಗಳಿಗೆ ಇದುವರೆಗೆ ಈ ಅಧಿಕಾರವನ್ನು ನೀಡಲಾಗಿಲ್ಲ.