ಮುಂಬೈ: ಶಿವಸೇನೆ (ಯುಬಿಟಿ) ಮಾಜಿ ಕಾರ್ಪೊರೇಟರ್ ಅಭಿಷೇಕ್ ಘೋಸಾಲ್ಕರ್ ಹತ್ಯೆ ಪ್ರಕರಣದ ತನಿಖೆಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಸಿಬಿಐಗೆ ವರ್ಗಾಯಿಸಿದೆ. ಪ್ರಕರಣದಲ್ಲಿ ಪೊಲೀಸರು ಕೆಲ ಆಯಾಮಗಳಲ್ಲಿ ತನಿಖೆ ನಡೆಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ನಗರ ಪೊಲೀಸರು ನಡೆಸುತ್ತಿರುವ ತನಿಖೆಯ ಸಾಚಾತನದ ಬಗ್ಗೆ ಶಂಕೆ ವ್ಯಕ್ತಪಡಿಸಿ ಘೋಸಾಲ್ಕರ್ ಅವರ ಪತ್ನಿ ತೇಜಸ್ವಿ ಘೋಸಾಲ್ಕರ್ ಸಲ್ಲಿಸಿದ್ದ ಮನವಿಯ ಬಗ್ಗೆ ನ್ಯಾಯಮೂರ್ತಿ ರೇವತಿ ಮೋಹಿತೆ ಡೇರೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
"ಈ ಪ್ರಕರಣದಲ್ಲಿ ಪೊಲೀಸರು ಕೆಲ ಆಯಾಮಗಳಲ್ಲಿ ತನಿಖೆಯನ್ನೇ ನಡೆಸಿಲ್ಲ. ಪುನಃ ಇಂತಹ ಲೋಪಗಳಿಗೆ ಅವಕಾಶ ಮಾಡಿಕೊಡಲಾಗದು. ಹೀಗೆಯೇ ಮುಂದುವರಿದರೆ ಇದು ನ್ಯಾಯದಾನಕ್ಕೆ ಅಡ್ಡಿಯಾಗಬಹುದು" ಎಂದು ನ್ಯಾಯಾಲಯ ಹೇಳಿದೆ. ಮುಂಬೈ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಮತ್ತು ತನಿಖೆ ತೃಪ್ತಿಕರವಾಗಿಲ್ಲ ಎಂದು ಆರೋಪಿಸಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಲಾಗಿತ್ತು.
ಫೆಬ್ರವರಿ 8 ರಂದು ಫೇಸ್ ಬುಕ್ ಲೈವ್ ಸೆಷನ್ನಲ್ಲಿ ಸ್ಥಳೀಯ ಉದ್ಯಮಿ ಮೌರಿಸ್ ನೊರೊನ್ಹಾ ಅವರು ಘೋಸಾಲ್ಕರ್ ಅವರನ್ನು ಬೋರಿವಿಲಿಯ ಕಚೇರಿಯಲ್ಲಿ ಗುಂಡಿಕ್ಕಿ ಕೊಂದಿದ್ದರು. ಸ್ವಲ್ಪ ಸಮಯದ ನಂತರ ನೊರೊನ್ಹಾ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಪೊಲೀಸರು ನೊರೊನ್ಹಾ ಅವರ ಅಂಗರಕ್ಷಕ ಅಮರೇಂದ್ರ ಸಿಂಗ್ ಅವನನ್ನು ಬಂಧಿಸಿದ್ದಾರೆ. ಅಮರೇಂದ್ರ ಸಿಂಗ್ ಅವರ ಪಿಸ್ತೂಲ್ನಿಂದಲೇ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ. ಸದ್ಯ ಈತ ಜಾಮೀನಿನ ಮೇಲೆ ಹೊರಗಿದ್ದಾನೆ.
ಬೊರಿವಿಲಿಯ ಎಂಎಚ್ ಬಿ ಪೊಲೀಸ್ ಠಾಣೆಯಲ್ಲಿ ನೊರೊನ್ಹಾ ಅಲಿಯಾಸ್ ಮೌರಿಸ್ ಭಾಯ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ನಿಬಂಧನೆಗಳ ಅಡಿ ಪ್ರಕರಣ ದಾಖಲಾಗಿತ್ತು. ನಂತರ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಯಿತು.
ನೊರೊನ್ಹಾ ಮತ್ತು ಘೋಸಾಲ್ಕರ್ ಮಧ್ಯೆ ವಿವಿಧ ವಿಚಾರಗಳಿಗಾಗಿ ವೈಮನಸ್ಸು ಮೂಡಿತ್ತು. ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಲ್ಲಿ ಮತ್ತು ಆ ಮೂಲಕ ತನ್ನ ರಾಜಕೀಯ ಭವಿಷ್ಯ ಹಾಳು ಮಾಡುವಲ್ಲಿ ಘೋಸಾಲ್ಕರ್ ಕೈವಾಡವಿತ್ತು ಎಂದು ನೊರೊನ್ಹಾ ನಂಬಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮೃತ ಅಭಿಷೇಕ್ ಘೋಸಾಲ್ಕರ್ (41) ಶಿವಸೇನೆಯ ಮಾಜಿ ಶಾಸಕ ವಿನೋದ್ ಘೋಸಾಲ್ಕರ್ ಅವರ ಪುತ್ರ.
ಇದನ್ನೂ ಓದಿ : ಆಕ್ಸ್ಫರ್ಡ್ ಯೂನಿಯನ್ನ 'ಕಾಶ್ಮೀರ ಚರ್ಚಾಕೂಟ'ದ ಆಹ್ವಾನ ತಿರಸ್ಕರಿಸಿದ ವಿವೇಕ್ ಅಗ್ನಿಹೋತ್ರಿ - Vivek Agnihotri