ನವದೆಹಲಿ: ನ್ಯಾಯಾಲಯದ ಕಲಾಪದ ವೇಳೆ ಮಹಿಳಾ ವಕೀಲರ ಬಗ್ಗೆ ಹಾಗೂ ಸಮುದಾಯವೊಂದು ನೆಲೆಸಿರುವ ಪ್ರದೇಶವನ್ನು ಪಾಕಿಸ್ತಾನ ಎಂಬುದಾಗಿ ಹೇಳಿಕೆ ನೀಡಿದ್ದ ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿರುವ ಬೆನ್ನಲ್ಲೇ ಈ ಪ್ರಕರಣದ ಸ್ವಯಂ ಪ್ರೇರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿದೆ.
ಇತ್ತೀಚೆಗೆ ಭೂಮಾಲೀಕ-ಹಿಡುವಳಿದಾರರ ವಿವಾದ ಪ್ರಕರಣವೊಂದರ ಕುರಿತು ವಿಚಾರಣೆ ವೇಳೆ ನ್ಯಾಯಮೂರ್ತಿ ಶ್ರೀಶಾನಂದ ಅವರು ಬೆಂಗಳೂರಿನಲ್ಲಿ ಒಂದು ಕೋಮಿನ ಬಾಹುಳ್ಯವಿರುವ ಪ್ರದೇಶವನ್ನು 'ಪಾಕಿಸ್ತಾನ' ಎಂಬುದಾಗಿ ಹಾಗೂ ಮಹಿಳಾ ವಕೀಲರೊಬ್ಬರ ಕುರಿತಂತೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ವಿಷಯ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಗಮನ ಹರಿಸುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಒತ್ತಾಯಿಸಿದ್ದರು. ಹೇಳಿಕೆ ಕುರಿತ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ಗೆ ಸೂಚಿಸಿತ್ತು. ಇದಾದ ಮರುದಿನವೇ ಸೆಪ್ಟಂಬರ್ 21ರಂದು ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ತೆರೆದ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ, ಕ್ಷಮೆಯಾಚಿಸಿದ್ದರು.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಸ್. ಖನ್ನಾ, ಬಿ. ಆರ್. ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ನೇತೃತ್ವದ ಪೀಠ, "ನ್ಯಾಯಾಧೀಶರು ಕ್ಷಮೆಯಾಚಿಸಿದ್ದಾರೆ. ಕ್ಷಮೆಯಾಚನೆಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಯ ಮತ್ತು ನ್ಯಾಯಾಂಗದ ಘನತೆಯ ಹಿತಾಸಕ್ತಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾವು ಪ್ರಜ್ಞಾಪೂರ್ವಕವಾಗಿ ನ್ಯಾಯಾಧೀಶರಿಗೆ ನೋಟಿಸ್ ನೀಡುವುದನ್ನು ತಡೆದಿದ್ದೇವೆ" ಎಂದು ಹೇಳಿದೆ.
"ನಾವು ಭಾರತದ ಭೂಪ್ರದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಲು ಸಾಧ್ಯವಿಲ್ಲ. ಅದು ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ಮೂಲಭೂತವಾಗಿ ವಿರುದ್ಧವಾಗಿದೆ" ಎಂದು ಸಿಜೆಐ ಈ ವೇಳೆ ಒತ್ತಿ ಹೇಳಿದರು.
ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸ್ತ್ರೀದ್ವೇಷ ಅಥವಾ ಸಮಾಜದ ಯಾವುದೇ ವಿಭಾಗಕ್ಕೆ ಹಾನಿಯುಂಟು ಮಾಡುವ ಹೇಳಿಕೆಗಳನ್ನು ಮಾಡದಂತೆ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು. ಇಂತಹ ವಿವಾದಗಳು ನ್ಯಾಯಾಲಯದ ಕಲಾಪಗಳ ನೇರ ಪ್ರಸಾರವನ್ನು ನಿಲ್ಲಿಸುವ ಬೇಡಿಕೆಯನ್ನು ಪ್ರಚೋದಿಸುವಂತಾಗಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹ, ವೀಕ್ಷಣೆ ಪೊಕ್ಸೋ ಕಾಯ್ದೆಯಡಿ ಅಪರಾಧ: ಸುಪ್ರೀಂ ಕೋರ್ಟ್ - Child Pornography Is Offence