ಕೊಲ್ಹಾಪುರ, ಮಹಾರಾಷ್ಟ್ರ: ಬೆಳಗಾವಿಯಿಂದ ಪುಣೆಗೆ ತೆರಳುತ್ತಿದ್ದ ಖಾಸಗಿ ಟ್ರಾವೆಲ್ ಬಸ್‌ಗೆ ಕೊಲ್ಹಾಪುರದಲ್ಲಿ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿದ್ದಾರೆ. ಶುಕ್ರವಾರ - ಶನಿವಾರ ಮಧ್ಯರಾತ್ರಿ ಸರಿ ಸುಮಾರು 12 ಗಂಟೆಗೆ ಪುಣೆ - ಬೆಂಗಳೂರು ಹೆದ್ದಾರಿಯ ಗೋಕುಲ್ ಶಿರಗಾಂವ್ ಮತ್ತು ಉಜಗಾಂವ್ ನಡುವೆ ಈ ಅವಘಡ ಸಂಭವಿಸಿದೆ.
ಚಲಿಸುತ್ತಿದ್ದ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಬಸ್‌ನಿಂದ ಆರು ಪ್ರಯಾಣಿಕರು ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಪ್ರಯಾಣಿಕ ಹೊರಗೆ ಬಾರದೇ ಬಸ್ನೊಳಗೆ ಸಿಲುಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ಚಾಲಕ ಮತ್ತು ಕಂಡಕ್ಟರ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಖಾಸಗಿ ಕಂಪನಿಯ ಬಸ್ ರಾತ್ರಿ 9 ಗಂಟೆ ಸುಮಾರಿಗೆ ಬೆಳಗಾವಿಯಿಂದ ಹೊರಡುವಾಗ ಸುಮಾರು 30 ಪ್ರಯಾಣಿಕರನ್ನು ಹೊತ್ತೊಯ್ದಿದೆ. ಬಸ್‌ಗೆ ಗೋಕುಲ್ ಶಿರಗಾಂವ್‌ನ ಮಯೂರ್ ಪೆಟ್ರೋಲ್ ಪಂಪ್ ಬಳಿ ಬಂದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ಕಂಡ ಚಾಲಕ ಮತ್ತು ಕಂಡಕ್ಟರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಯಾಣಿಕರು ಗಾಬರಿಯಿಂದ ಬಸ್‌ನಿಂದ ಕೆಳಗಿಳಿದರು. ಆದರೆ, ಒಬ್ಬ ಪ್ರಯಾಣಿಕ ಮಲಗಿದ್ದ ಕಾರಣ ಒಳಗೆ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲವೇ ನಿಮಿಷಗಳಲ್ಲಿ ಬಸ್ ಬೆಂಕಿಗೆ ಆಹುತಿಯಾಯಿತು. ಕೊಲ್ಹಾಪುರ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಹಠಾತ್ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಶಿರಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಓದಿ: ಕುಲ್ಗಾಮ್ನಲ್ಲಿ ಸೇನಾ ವಾಹನ ಅಪಘಾತ: ಯೋಧ ಸಾವು, 8 ಸೈನಿಕರಿಗೆ ಗಾಯ