ನವದೆಹಲಿ: ಬುಧವಾರದಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಇದು ಸರ್ಕಾರದ ಕೊನೆಯ ಅಧಿವೇಶನವೂ ಹೌದು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎರಡು ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಅಧಿವೇಶನ ಆರಂಭವಾಗಲಿದೆ.
ಈ ವರ್ಷ ಲೋಕಸಭೆ ಚುನಾವಣೆಯ ನಡೆಯಲಿದ್ದು, ಇರುವ ಅವಧಿಗೆ ಯೋಜನೆಗಳಿಗೆ ಅನುದಾನ ಪಡೆಯಲು ಮಂಡಿಸುವ ಬಜೆಟ್ ಇದಾಗಿರಲಿದೆ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆಗೆ ಚುನಾವಣೆ ನಡೆದ ಬಳಿಕ ಅಧಿಕಾರಕ್ಕೆ ಬರುವ ಸರ್ಕಾರ ಜೂನ್ ಅಥವಾ ಜುಲೈನಲ್ಲಿ ಪೂರ್ಣ ಬಜೆಟ್ ಮಂಡಸಲಿದೆ.
ಫೆಬ್ರವರಿ 1 ರಂದು ಮಂಡನೆಯಾಗುವ ಮಧ್ಯಂತರ ಬಜೆಟ್ ಹಣಕಾಸಿನ ವರ್ಷದ ಆರಂಭಿಕ ತಿಂಗಳುಗಳಿಗೆ ಅನ್ವಯವಾಗಿರುತ್ತದೆ. ಅಂದರೆ, 2024 ರ ಏಪ್ರಿಲ್ನಿಂದ ಜೂನ್ ತನಕದ ಸಿಬ್ಬಂದಿ ವೇತನ ಮತ್ತು ಇತರ ಅಗತ್ಯ ವೆಚ್ಚಗಳನ್ನು ನಿಭಾಯಿಸುವ ಸಲುವಾಗಿ ಈ ಆಯವ್ಯಯ ಇರಲಿದೆ.
ಅಧಿವೇಶನದ ವಿಶೇಷತೆಗಳೇನು?
- ಜನವರಿ 31 ರಿಂದ ಫೆಬ್ರವರಿ 9 ರವರೆಗೆ ಈ ಅಧಿವೇಶನ ನಡೆಯುತ್ತದೆ. ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಭಾಷಣ ಮಾಡುವ ಮೂಲಕ ಬಜೆಟ್ ಅಧಿವೇಶನಕ್ಕೆ ಔಪಚಾರಿಕವಾಗಿ ಚಾಲನೆ ನೀಡುವರು.
- ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ ಕೊನೆಯ ಅಧಿವೇಶನವಾಗಿದೆ.
- ಮರುದಿನ ಅಂದರೆ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಯವ್ಯಯ ಮಂಡಿಸಲಿದ್ದಾರೆ.
- ಸರ್ಕಾರ ಮಂಡಿಸುವ ಬಜೆಟ್ ಅವಧಿಯು ಏಪ್ರಿಲ್ 1 ರಿಂದ ಜೂನ್ ಕೊನೆಯವರೆಗೂ ಚಾಲ್ತಿಯಲ್ಲಿ ಇರಲಿದೆ. ಬಳಿಕ ಚುನಾವಣೆ ನಡೆದು ರಚನೆಯಾಗುವ ಸರ್ಕಾರ ಹೊಸದಾಗಿ ಪೂರ್ಣ ಬಜೆಟ್ ಮಂಡನೆ ಮಾಡಲಿದೆ.
- ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಸತತ 6 ನೇ ಬಜೆಟ್ ಇದಾಗಿದೆ. ಅವರು ಈವರೆಗೂ 5 ವಾರ್ಷಿಕ ಬಜೆಟ್ ಮಂಡಿಸಿದ್ದರೆ, ನಾಳೆಯದ್ದು ಮಧ್ಯಂತರ ಬಜೆಟ್ ಆಗಿದೆ. ಈ ಮೂಲಕ ಅವರು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಸಾಧನೆಯನ್ನು ಸರಿಗಟ್ಟಲಿದ್ದಾರೆ.
ಸುಗಮ ಕಲಾಪಕ್ಕೆ ಮನವಿ: ಕೊನೆಯ ಬಜೆಟ್ ಅಧಿವೇಶನದ ಕಲಾಪಗಳು ಸುಗಮವಾಗಿ ನಡೆಯಲು ಸಹಕರಿಸುವಂತೆ ವಿರೋಧ ಪಕ್ಷಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಸಹ ನಾಳಿನ ಬಜೆಟ್ ಅನ್ವಯವಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಎಲ್ಲ ರಾಜಕೀಯ ಪಕ್ಷಗಳ ನಾಯಕರ ಸಭೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 9 ರಂದು ಮುಕ್ತಾಯಗೊಳ್ಳುವ 17 ನೇ ಲೋಕಸಭೆಯ ಕೊನೆಯ ಅಧಿವೇಶನವು ರಾಷ್ಟ್ರಪತಿಗಳ ಭಾಷಣದಿಂದ ಆರಂಭವಾಗಿ ಮಧ್ಯಂತರ ಬಜೆಟ್ ಮಂಡನೆ, ಪ್ರಧಾನ ಮಂತ್ರಿಗಳ ಉತ್ತರದಿಂದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಕೊನೆಗೊಳ್ಳಲಿದೆ.
ಇದನ್ನೂ ಓದಿ: ಹೂಡಿಕೆಗಳನ್ನು ಆಕರ್ಷಿಸಲು ಕೇಂದ್ರ ಬಜೆಟ್ನಲ್ಲಿ ಉತ್ಪಾದನಾ ವಲಯವನ್ನು ಉತ್ತೇಜಿಸುವ ಅಗತ್ಯವಿದೆ