ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕೊನೆಗೂ ಅಬಕಾರಿ ನೀತಿ ಹಗರಣದಲ್ಲಿ ಸುಮಾರು 5 ತಿಂಗಳ ಬಳಿಕ ಜಾಮೀನು ಪಡೆಯುವ ಮೂಲಕ ಕವಿತಾಗೆ ರಿಲೀಫ್ ಸಿಕ್ಕಿದೆ.
ಕವಿತಾ ವಿರುದ್ಧ ಸಾಕ್ಷಿ ಕೇಳಿದ ಪೀಠ: ಪ್ರಕರಣದ ತನಿಖೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ನೇತೃತ್ವದ ಪೀಠವು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವ ದಾಖಲೆಗಳು ಇದೆ ಎಂಬುದನ್ನು ತೋರಿಸುವಂತೆ ಇಡಿ, ಸಿಬಿಐ ಪರ ವಕೀಲರನ್ನು ಕೇಳಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕವಿತಾ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಜಾಮೀನು ಕೋರಿದ್ದಲ್ಲದೇ, ಕವಿತಾ ವಿರುದ್ಧದ ತನಿಖೆಯನ್ನು ಈಗಾಗಲೇ ಎರಡು ಸಂಸ್ಥೆಗಳು ಪೂರ್ಣಗೊಳಿಸಿವೆ ಎಂದು ಪೀಠದ ಗಮನಕ್ಕೆ ತಂದರು.
ಜತೆಗೆ ಎರಡು ಪ್ರಕರಣಗಳಲ್ಲಿ ಸಹ ಆರೋಪಿಯಾಗಿರುವ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವ ಬಗ್ಗೆಯೂ ಉಲ್ಲೇಖಿಸಿದರು. ಆಗ ತನಿಖಾ ಸಂಸ್ಥೆಗಳ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, 'ಕೆ. ಕವಿತಾ ಅವರು ತಮ್ಮ ಮೊಬೈಲ್ ಫೋನ್ನ್ನು ನಾಶಪಡಿಸಿದ್ದಾರೆ. ಅದರಲ್ಲಿನ ಡಾಟಾವನ್ನು ಫಾರ್ಮ್ಯಾಟ್ ಮಾಡಿದ್ದಾರೆ. ಹಾಗೇ ಅವರ ನಡವಳಿಕೆಯು ಸಾಕ್ಷ್ಯವನ್ನು ತಿರುಚುವಂತಿದೆ ಎಂದು ಪ್ರತಿಪಾದಿಸಿದರು. ಇದಕ್ಕೆ ವಕೀಲ ಮುಕುಲ್ ರೋಹಟಗಿ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ ಈ ಆರೋಪ 'ಬೋಗಸ್ ಎಂದರು.
ವಾದ - ಪ್ರತಿವಾದ ಆಲಿಸಿದ ಪೀಠ ಕವಿತಾ ಅವರು ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ತೋರಿಸಲು ಯಾವ ಪೂರ್ವ ದಾಖಲೆಗಳು ಇದೆ ಎಂದು ಇಡಿ ಮತ್ತು ಸಿಬಿಐಗೆ ಪ್ರಶ್ನಿಸಿತು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ಗೆ ಸಿಬಿಐ ಅಂತಿಮ ಆರೋಪ ಪಟ್ಟಿ ಸಲ್ಲಿಸಿದ್ದು, ಇಡಿ ತನಿಖೆ ಪೂರ್ಣಗೊಂಡಿದೆ. ಆರೋಪಿಗಳು ಜೈಲಿನಲ್ಲಿ ಉಳಿಯುವ ಅಗತ್ಯವಿಲ್ಲ. ಅದಕ್ಕಾಗಿಯೇ ಕವಿತಾಗೆ ಜಾಮೀನು ನೀಡಲಾಗುತ್ತಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿತು.
ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಬಿಆರ್‌ಎಸ್ ಎಮ್ಎಲ್ಸಿ ಕವಿತಾ ಅವರನ್ನು ಮಾರ್ಚ್ 15 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಿವಾಸದಿಂದ ಇಡಿ ಕವಿತಾ (46) ಅವರನ್ನು ಬಂಧಿಸಿತ್ತು. ಸಿಬಿಐ ಏಪ್ರಿಲ್ 11 ರಂದು ತಿಹಾರ್ ಜೈಲಿನಿಂದ ಅವರನ್ನು ಅರೆಸ್ಟ್ ಮಾಡಿತ್ತು.