ಮುಂಬೈ: ಮಹಾರಾಷ್ಟ್ರದ 15ನೇ ವಿಧಾನಸಭೆಯ ಸ್ಪೀಕರ್ ಆಗಿ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾರ್ವೇಕರ್ ಅವರಿಗೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, 1960 ರಲ್ಲಿ ರಾಜ್ಯ ರಚನೆಯಾದ ನಂತರ ಸ್ಪೀಕರ್ ಆಗಿ ಪುನರಾಯ್ಕೆಯಾದ ಕೆಳಮನೆಯ ಎರಡನೇ ಸದಸ್ಯ ಎಂದು ಹೇಳಿದರು.
"1960ರಲ್ಲಿ ಮಹಾರಾಷ್ಟ್ರ ರಾಜ್ಯ ರಚನೆಯಾದಾಗಿನಿಂದ ಬಾಳಾಸಾಹೇಬ್ ಭರ್ಡೆ ಅವರು ಎರಡು ಬಾರಿ ಸ್ಪೀಕರ್ ಆಗಿದ್ದರು. ಭರ್ಡೆ ನಂತರ, ನಾರ್ವೇಕರ್ ಈ ಗೌರವವನ್ನು ಪಡೆದ ವಿಧಾನಸಭೆಯ ಎರಡನೇ ಸದಸ್ಯರಾಗಿದ್ದಾರೆ" ಎಂದು ಮುಖ್ಯಮಂತ್ರಿ ಹೇಳಿದರು.
ಕುಂದನ್ಮಲ್ ಫಿರೋಡಿಯಾ ಅವರು ಮರು ಆಯ್ಕೆಯಾಗಿದ್ದ ಸದನದ ಮೊದಲ ಸ್ಪೀಕರ್ ಆಗಿದ್ದರು. ಆದರೆ ಆಗ ಬಾಂಬೆ ರಾಜ್ಯವಾಗಿತ್ತು. ನಂತರ ಮಹಾರಾಷ್ಟ್ರ ರಚನೆಗೆ ಮೊದಲು ಸಯಾಜಿ ಎಲ್ ಸಿಲಾಮ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು. ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಅವರು ಮರು ಆಯ್ಕೆಯಾಗಿದ್ದರು ಎಂಬುದನ್ನು ಸಿಎಂ ಫಡ್ನವೀಸ್ ಸ್ಮರಿಸಿದರು.
ನಾರ್ವೇಕರ್ ಅವರು ಭಾನುವಾರ ನಾಮಪತ್ರ ಸಲ್ಲಿಸಿದ್ದರು. ಆದರೆ ಪ್ರತಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ (ಎಂವಿಎ) ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. ಎರಡೂವರೆ ವರ್ಷಗಳ ಕಾಲ 14 ನೇ ವಿಧಾನಸಭೆಯಲ್ಲಿ ಸ್ಪೀಕರ್ ಆಗಿದ್ದ ಬಿಜೆಪಿ ನಾಯಕ ನಾರ್ವೇಕರ್ ನವೆಂಬರ್ 20 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಂಬೈನ ಕೊಲಾಬಾ ವಿಧಾನಸಭಾ ಸ್ಥಾನದಿಂದ ಮರು ಆಯ್ಕೆಯಾಗಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಆಗಿದ್ದ ಅವಧಿಯಲ್ಲಿ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದಲ್ಲಿ ವಿಭಜನೆಯ ನಂತರ ಏಕನಾಥ್ ಶಿಂಧೆ ನೇತೃತ್ವದ ಪಕ್ಷವು ಕಾನೂನುಬದ್ಧ ಮತ್ತು ನಿಜವಾದ ಶಿವಸೇನೆ ಎಂದು ನಾರ್ವೇಕರ್ ತೀರ್ಪು ನೀಡಿದ್ದರು. ಅಜಿತ್ ಪವಾರ್ ನೇತೃತ್ವದ ಬಣವೇ ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಎಂದೂ ಅವರು ರೂಲಿಂಗ್ ನೀಡಿದ್ದರು.
ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವು 288 ಸ್ಥಾನಗಳ ಪೈಕಿ 230 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ಭುತ ಪ್ರದರ್ಶನ ನೀಡಿದೆ. ಎಂವಿಎ ಒಟ್ಟಾರೆಯಾಗಿ ಕೇವಲ 46 ಸ್ಥಾನಗಳನ್ನು ಮಾತ್ರ ಗಳಿಸಲು ಶಕ್ತವಾಗಿದೆ.
15 ನೇ ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ: ಮಹಾಯುತಿ - ಬಿಜೆಪಿ 132 ಶಾಸಕರು; ಶಿವಸೇನೆ 57; ಎನ್ಸಿಪಿ 41; ಜನ ಸುರಾಜ್ಯ ಶಕ್ತಿ ಪಕ್ಷ 2; ರಾಷ್ಟ್ರೀಯ ಯುವ ಸ್ವಾಭಿಮಾನ್ ಪಾರ್ಟಿ 1; ರಾಷ್ಟ್ರೀಯ ಸಮಾಜ ಪಕ್ಷ 1; ಪಕ್ಷೇತರರು 2; ರಾಜರ್ಷಿ ಶಾಹು ವಿಕಾಸ್ ಅಘಾಡಿ 1.
ವಿರೋಧ ಪಕ್ಷ: ಶಿವಸೇನೆ (ಯುಬಿಟಿ) 20 ಶಾಸಕರು; ಕಾಂಗ್ರೆಸ್ 16; ಎನ್ಸಿಪಿ (ಎಸ್ಪಿ) 10; ಸಿಪಿಎಂ 1; ಪಿಡಬ್ಲ್ಯೂಪಿ 1; ಎಐಎಂಐಎಂ 1; ಸಮಾಜವಾದಿ ಪಕ್ಷ 2.
ಇದನ್ನೂ ಓದಿ : ಸೈಬರ್ ವಂಚಕರ ವಿರುದ್ಧ 'ಆಪರೇಷನ್ ತಿರೈನೀಕು': ತಮಿಳುನಾಡು ಪೊಲೀಸರಿಂದ 70 ಶಂಕಿತರ ಬಂಧನ