ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ತನ್ನ 'ಸಂಕಲ್ಪ ಪತ್ರ' ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಲಿದೆ. ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಇತರ ಹಿರಿಯ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ಬಿಜೆಪಿ ಸರ್ಕಾರವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು 370ನೇ ವಿಧಿಯನ್ನು ರದ್ದುಗೊಳಿಸುವುದು ಸೇರಿದಂತೆ ತನ್ನ ಪ್ರಮುಖ ಸೈದ್ಧಾಂತಿಕ ಭರವಸೆಗಳನ್ನು ಈಡೇರಿಸಿದೆ. ಈಗ ಆಡಳಿತ ಪಕ್ಷದ ದೊಡ್ಡ ಸಾಂಸ್ಕೃತಿಕ ಮತ್ತು ಹಿಂದುತ್ವದ ಅಜೆಂಡಾಗಳು ಪ್ರಣಾಳಿಕೆಯಲ್ಲಿ ಹೇಗೆ ಇರುತ್ತವೆ ಎಂಬುದರ ಮೇಲೆ ಎಲ್ಲರ ಕಣ್ಣಿದೆ.
ಯುವಕರು, ಮಹಿಳೆಯರು, ರೈತರು ಮತ್ತು ಬಡವರೇ ಬಿಜೆಪಿ ಪಾಲಿಗೆ ನಾಲ್ಕು ಜಾತಿಗಳು ಎಂದು ಮೋದಿ ಆಗಾಗ್ಗೆ ಮಾತನಾಡುತ್ತಾರೆ. ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳಲ್ಲಿ ಇದು ಕೂಡ ಒಂದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿಯನ್ನು ಬಿಜೆಪಿ ರಚನೆ ಮಾಡಿತ್ತು. ರಾಜನಾಥ್ 2019ರ ಚುನಾವಣೆಯಲ್ಲೂ ಪಕ್ಷದ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಈಗಾಗಲೇ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 'ನ್ಯಾಯ ಪತ್ರ' ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಮುಖ ಐದು ಅಂಶಗಳಲ್ಲೇ ಕಾಂಗ್ರೆಸ್ ಪ್ರಣಾಳಿಕೆ ಕೇಂದ್ರೀಕೃತವಾಗಿದ್ದು, 25 ಗ್ಯಾರಂಟಿಗಳನ್ನು ನೀಡಿದೆ. ಲೋಕಸಭೆ ಚುನಾವಣೆಯು ಏಪ್ರಿಲ್ 19 ರಿಂದ ಜೂನ್ 1ರ ವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 105 ವರ್ಷ: ಹುತಾತ್ಮರಿಗೆ ರಾಷ್ಟ್ರಪತಿ, ಪ್ರಧಾನಿ ನಮನ