ನವದೆಹಲಿ: ತಮ್ಮ ಸರ್ಕಾರವನ್ನು ಬೀಳಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಈ ಆರೋಪದ ವಿರುದ್ಧ ಪೊಲೀಸರಿಗೆ ದೂರು ನೀಡಲಿದ್ದೇವೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಹೇಳಿದರು.
ವಿರೋಧ ಪಕ್ಷದ ನಾಯಕ ರಾಮ್‌ವೀರ್ ಬಿಧುರಿ ನೇತೃತ್ವದ ಬಿಜೆಪಿ ಶಾಸಕರ ನಿಯೋಗ ಮಂಗಳವಾರ ದೆಹಲಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಲಿದೆ. ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ಪ್ರಾರಂಭಿಸುವಂತೆ ದೂರು ಸಲ್ಲಿಸಲಿದ್ದೇವೆ ಎಂದು ಅವರು ತಿಳಿಸಿದರು.
ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಭ್ರಷ್ಟಾಚಾರವನ್ನು ಮರೆಮಾಚುತ್ತಿದ್ದಾರೆ. ಇದಕ್ಕಾಗಿ ಅವರ ಪಕ್ಷದ ಸಚಿವರು ನಿರಂತರವಾಗಿ ಸುಳ್ಳು ಹೇಳುತ್ತಿದ್ದಾರೆ. ತಾವು ಮಾಡಿರುವ ಭ್ರಷ್ಟಾಚಾರಗಳ ಬಗ್ಗೆ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಈ ಆರೋಪ ಹೊರಿಸಲಾಗುತ್ತಿದೆ ಎಂದು ದೆಹಲಿ ಬಿಜೆಪಿ ದೂರಿದೆ.
ಕೇಜ್ರಿವಾಲ್ ಆರೋಪ: ಬಿಜೆಪಿ ಹಣ ಮತ್ತು ಚುನಾವಣೆಗೆ ಟಿಕೆಟ್ ನೀಡುವ ಆಮಿಷವೊಡ್ಡಿ ಆಪ್ ಶಾಸಕರನ್ನು ಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ಏಳು ಮಂದಿ ಶಾಸಕರನ್ನು ಈಗಾಗಲೇ ಸಂಪರ್ಕಿಸಿದ್ದಾರೆ. ಮದ್ಯ ಹಗರಣದಲ್ಲಿ ತನ್ನನ್ನು ಬಂಧಿಸಲು ಮತ್ತು ದೆಹಲಿಯಲ್ಲಿ ತನ್ನ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು.
ಇದನ್ನೂ ಓದಿ: ದೆಹಲಿ ಅಬಕಾರಿ ಹಗರಣ: ಸಿಎಂ ಅರವಿಂದ್ ಕೇಜ್ರಿವಾಲ್ಗೆ ನಾಲ್ಕನೇ ಸಲ ಇಡಿ ಸಮನ್ಸ್