ಪುಣೆ (ಮಹಾರಾಷ್ಟ್ರ): ಇಡಿ, ಸಿಬಿಐ ಮತ್ತು ಐಟಿಗಳನ್ನು ಮೋದಿ ನೇತೃತ್ವದ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಆರೋಪಿಸಿದ್ದಾರೆ. ಪುಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ''ಇಡಿ, ಸಿಬಿಐಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬೇರೆ ರಾಜ್ಯಗಳ ಸಚಿವರ ವಿರುದ್ಧ ಕೇಂದ್ರದ ಯಂತ್ರಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ'' ಎಂದಿದ್ದಾರೆ.
ಪ್ರತಿಪಕ್ಷ ನಾಯಕರ ಮನೆ ಮೇಲೆ ದಾಳಿ ನಡೆಸುವುದು ಸರಿಯಲ್ಲ. ಮಹಾರಾಷ್ಟ್ರ, ರೋಹಿತ್ ಪವಾರ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕ್ರಮ ಅನುಚಿತವಾಗಿದೆ. ಅನಾವಶ್ಯಕವಾಗಿ ರಾಜ್ಯದಲ್ಲಿ ತೀವ್ರ ಭಯೋತ್ಪಾದನೆಯಂತಹ ಚಟುವಟಿಕೆಗಳನ್ನು ಸೃಷ್ಟಿಸಲಾಗುತ್ತಿದೆ. ಸಕ್ರಿಯ ಕಾರ್ಯಕರ್ತರನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
2005 ಮತ್ತು 2023ರ ನಡುವೆ ಇಡಿ ಕೈಗೊಂಡ ಕ್ರಮಗಳ ಬಗ್ಗೆ ಅಂಕಿ- ಅಂಶ ಸಮೇತ ಉಲ್ಲೇಖಿಸಿದ ಅವರು, ಈ ಅವಧಿಯಲ್ಲಿ ಜಾರಿ ನಿರ್ದೇಶನಾಲಯ 5,806 ಪ್ರಕರಣಗಳನ್ನು ದಾಖಲಿಸಿದೆ. ಅವುಗಳಲ್ಲಿ 25 ಕೇಸ್ಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಪ್ರಕರಣಗಳ ವಿಲೇವಾರಿ ದರವು ಶೇ 0.42 ಮತ್ತು ಶಿಕ್ಷೆಯ ಪ್ರಮಾಣ ಮಾತ್ರ ಕೇವಲ ಶೇ 0.40 ರಷ್ಟು ಎಂದರು.
2005 ಮತ್ತು 2023ರ ನಡುವೆ ಯುಪಿಎ ಸೇರಿದಂತೆ ಎರಡು ಸರ್ಕಾರಗಳು ಕೇಂದ್ರದಲ್ಲಿ ಅಧಿಕಾರದಲ್ಲಿದ್ದವು. ಯುಪಿಎ ಆಡಳಿತದಲ್ಲಿ ಜಾರಿ ನಿರ್ದೇಶನಾಲಯವು 26 ನಾಯಕರನ್ನು ತನಿಖೆಗೆ ಒಳಪಡಿಸಿದೆ. ಅವರಲ್ಲಿ ಐವರು ಕಾಂಗ್ರೆಸ್ ಮತ್ತು ಮೂವರು ಬಿಜೆಪಿ ನಾಯಕರಿದ್ದರು. ಯುಪಿಎ ಆಡಳಿತದ ಅವಧಿಯಲ್ಲಿ ಇ.ಡಿ ಕ್ರಮವು ರಾಜಕೀಯ ಪ್ರೇರಿತವಾಗಿರಲಿಲ್ಲ. ಆದರೆ, 2014ರ ನಂತರ ಒಬ್ಬನೇ ಒಬ್ಬ ಬಿಜೆಪಿ ನಾಯಕನನ್ನು ಇಡಿ ವಿಚಾರಣೆಗೆ ಒಳಪಡಿಸಿಲ್ಲ ಎಂದು ಪವಾರ್ ಅಂಕಿ ಅಂಶ ಸಮೇತ ವಿವರಣೆ ನೀಡಿದರು.
ಇ.ಡಿ ಕ್ರಮಗಳ ಬಗ್ಗೆ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿರುತ್ತದೆ. ಬಿಜೆಪಿಯಿಂದ ಆದೇಶ ಬಂದಂತೆ ತೋರುತ್ತಿದೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಇ.ಡಿ ದುರ್ಬಳಕೆಯಾಗಿರಲಿಲ್ಲ. ಆದರೆ ಈಗ ಪ್ರತಿಪಕ್ಷ ನಾಯಕರಲ್ಲಿ ಭಯ ಮೂಡಿಸಲು ಈ ತನಿಖಾ ಸಂಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ : ಅಜಿತ್ ಪವಾರ್ ಬಣವೇ 'ನಿಜವಾದ ಎನ್‌ಸಿಪಿ': ಮಹಾರಾಷ್ಟ್ರ ಸ್ಪೀಕರ್ ತೀರ್ಪು