ಕೋಲ್ಕತಾ: ಅಯೋಧ್ಯೆಯ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದಿಂದ ದೂರ ಉಳಿದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕೋಲ್ಕತಾದಲ್ಲಿ ಸೌಹಾರ್ದ ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಧರ್ಮ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಭಗವಾನ್ ರಾಮನ ಬಗ್ಗೆ ಮಾತನಾಡುವಾಗ ಸೀತಾದೇವಿಯ ಬಗ್ಗೆ ಉಲ್ಲೇಖಿಸದ ಬಿಜೆಪಿ ಮಹಿಳಾ ವಿರೋಧಿ ಎಂದು ಜರಿದರು.
ಅಯೋಧ್ಯೆ ಕಾರ್ಯಕ್ರಮದ ಸಮಯದಲ್ಲಿಯೇ ನಡೆದ ಟಿಎಂಸಿಯ 'ಸಂಹತಿ ರ್ಯಾಲಿ'ಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಚುನಾವಣಾ ಪೂರ್ವ ಧಾರ್ಮಿಕ ರಾಜಕಾರಣವು ಬಡವರ ರಕ್ತವನ್ನು ದೇವರ ಬಲಿಪೀಠದಲ್ಲಿ ಅರ್ಪಿಸಲು ಕಾರಣವಾಗಬಾರದು" ಎಂದು ಒತ್ತಿ ಹೇಳಿದರು. "ಚುನಾವಣೆಗೆ ಮುಂಚಿತವಾಗಿ ಧರ್ಮವನ್ನು ರಾಜಕೀಯಗೊಳಿಸುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ಅಂತಹ ಅಭ್ಯಾಸಗಳನ್ನು ವಿರೋಧಿಸುತ್ತೇನೆ. ಭಗವಾನ್ ರಾಮನನ್ನು ಪೂಜಿಸುವವರಿಗೆ ನನ್ನ ಆಕ್ಷೇಪವಿಲ್ಲ, ಆದರೆ ಜನರ ಆಹಾರ ಪದ್ಧತಿಯಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾನು ಆಕ್ಷೇಪಿಸುತ್ತೇನೆ" ಎಂದು ಅವರು ಹೇಳಿದರು.
ಸೋಮವಾರ ಬ್ಯಾನರ್ಜಿ ಸರ್ವಧರ್ಮ ರ್ಯಾಲಿಯಲ್ಲಿ ಮಾತನಾಡಿದ ನಂತರ ದೇವಾಲಯ, ಮಸೀದಿ, ಚರ್ಚ್ ಮತ್ತು ಗುರುದ್ವಾರ ಸೇರಿದಂತೆ ವಿವಿಧ ಪೂಜಾ ಸ್ಥಳಗಳಿಗೆ ಭೇಟಿ ನೀಡಿದರು.
"ನಾನು ರಾಮನ ವಿರೋಧಿಯಲ್ಲ. ಆದರೆ ಸೀತಾ ದೇವಿಯ ಬಗ್ಗೆ ಯಾಕೆ ಅವರು ಮಾತನಾಡುತ್ತಿಲ್ಲ? ಭಗವಾನ್ ರಾಮನ ವನವಾಸದ ಸಮಯದಲ್ಲಿ ಸೀತಾದೇವಿ ಅವನೊಂದಿಗೆ ಇದ್ದಳು. ಬಿಜೆಪಿಯವರು ಈ ಬಗ್ಗೆ ಮಾತನಾಡುವುದಿಲ್ಲ. ಅವರು ಮಹಿಳಾ ವಿರೋಧಿಗಳು. ನಾವು ದುರ್ಗಾ ದೇವಿಯನ್ನು ಪೂಜಿಸುವವರು. ಹೀಗಾಗಿ ಅವರು ಧರ್ಮದ ಬಗ್ಗೆ ನಮಗೆ ಉಪನ್ಯಾಸ ನೀಡುವ ಅಗತ್ಯವಿಲ್ಲ" ಎಂದು ಸಿಎಂ ಪ್ರತಿಪಾದಿಸಿದರು.
ಈ ದಿನವನ್ನು ಸ್ವಾತಂತ್ರ್ಯದ ದಿನ ಎಂದು ಬಿಜೆಪಿ ಬಣ್ಣಿಸಿರುವುದನ್ನು ಉಲ್ಲೇಖಿಸಿದ ಬ್ಯಾನರ್ಜಿ, "ಬಿಜೆಪಿ ಯಾವ ರೀತಿಯ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದೆ ಎಂಬುದು ನನಗೆ ತಿಳಿದಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ಇಲ್ಲದವರು ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದಾರೆ" ಎಂದರು.
ಧರ್ಮದ ಹೆಸರಿನಲ್ಲಿ ಬಿಜೆಪಿ ಜನರನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದ ಬ್ಯಾನರ್ಜಿ, "ಚುನಾವಣೆಗೆ ಮೊದಲು ಹಿಂದೂ ಮತ್ತು ಮುಸ್ಲಿಂ ಮತಗಳನ್ನು ವಿಭಜಿಸಲು ಅದು ಪ್ರಯತ್ನಿಸುತ್ತದೆ" ಎಂದು ಹೇಳಿದರು. "ಮತಗಳ ಧ್ರುವೀಕರಣದಲ್ಲಿ ತೊಡಗಲು ಮುಸ್ಲಿಂ ನಾಯಕತ್ವದ ಸೋಗಿನಲ್ಲಿ ಕೆಲ ಏಜೆಂಟರನ್ನು ನೇಮಿಸಲಾಗಿದೆ. ಹಣಕ್ಕೆ ಬದಲಾಗಿ ಮುಸ್ಲಿಂ ಮತಗಳನ್ನು ವಿಭಜಿಸಲು ಅವರು ಈ ಕೆಲಸ ಮಾಡುತ್ತಿದ್ದಾರೆ. ಬೆಂಕಿಯನ್ನು ಹೊತ್ತಿಸುವುದು ತುಂಬಾ ಸುಲಭ, ಆದರೆ ನಿಜವಾದ ಸಹಾನುಭೂತಿ ಅದನ್ನು ನಂದಿಸುವ ಪ್ರಯತ್ನಗಳಲ್ಲಿದೆ" ಎಂದು ಬ್ಯಾನರ್ಜಿ ಹೇಳಿದರು.
ಇದನ್ನೂ ಓದಿ: ಗಾಜಾದಲ್ಲಿ ಹಮಾಸ್ ಭೀಕರ ದಾಳಿ; 21 ಇಸ್ರೇಲ್ ಸೈನಿಕರು ಸಾವು