ಭಿವಂಡಿ (ಮಹಾರಾಷ್ಟ್ರ): ಖಟ್ಟರ್ ಹಿಂದೂವಾದಿ, ಬಿಜೆಪಿ ಶಾಸಕ ಟಿ. ರಾಜಾಸಿಂಗ್ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನ ಗೆದ್ದಿದ್ದರೆ, ಭಾರತ ಹಿಂದು ರಾಷ್ಟ್ರವಾಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಭಿವಂಡಿ ತಾಲೂಕಿನಲ್ಲಿ ನಡೆದ ಹಿಂದೂ ಧರ್ಮ ಸಭೆಯಲ್ಲಿ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ದಾಟಿದ್ದರೆ ಭಾರತ ಹಿಂದು ರಾಷ್ಟ್ರವಾಗುತ್ತಿತ್ತು. ಮಹಾರಾಷ್ಟ್ರದಲ್ಲಿ ಮಠ ಮಂದಿರಗಳು ಸುರಕ್ಷಿತವಾಗಿಲ್ಲ. ಛತ್ರಪತಿ ಶಿವಾಜಿ ಮಹಾರಾಜರು 370 ಕೋಟೆಗಳನ್ನು ವಶಪಡಿಸಿಕೊಂಡರು. ದುರದೃಷ್ಟ ಎಂದರೆ, ಅದೇ ಕೋಟೆಗಳ ಮೇಲೆ ಧರ್ಮದ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಲಾಗಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಕೋಟೆಗಳ ಮೇಲಿನ ಈ ಸ್ಥಳಗಳನ್ನು ತೆರವು ಮಾಡಬೇಕು ಎಂದು ಸಿಎಂ ಏಕನಾಥ ಶಿಂಧೆ ಅವರಿಗೆ ಮನವಿ ಮಾಡಿದರು.
ಮಹಾರಾಷ್ಟ್ರದಲ್ಲಿ 1 ಲಕ್ಷ ಎಕರೆ ಭೂಮಿ ವಕ್ಫ್ ಮಂಡಳಿಯ ಒಡೆತನದಲ್ಲಿದೆ. ಇಡೀ ದೇಶದಲ್ಲಿ 10 ಲಕ್ಷ ಎಕರೆ ಭೂಮಿ ವಕ್ಫ್ ಬೋರ್ಡ್ ಬಳಿ ಇದೆ. ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ವಕ್ಫ್ ಬೋರ್ಡ್ ಕಾಯ್ದೆಯನ್ನು ರದ್ದುಗೊಳಿಸಬೇಕು. ವಕ್ಫ್ ಬೋರ್ಡ್ ಜಾಗದಲ್ಲಿ ಆಸ್ಪತ್ರೆ, ಆಟದ ಮೈದಾನ, ಕಾಲೇಜು, ಮನೆ ನಿರ್ಮಿಸಿಕೊಡುವಂತೆ ಶಾಸಕರು ಮನವಿ ಮಾಡಿದರು.
ಕೆಲವರು ಹಿಂದೂ-ಮುಸ್ಲಿಂ ಭಾಯಿ ಭಾಯಿ ಎಂದು ಘೋಷಣೆ ಕೂಗುತ್ತಾ ಲವ್ ಜಿಹಾದ್ ನಡೆಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಲವ್ ಜಿಹಾದ್, ಗೋಹತ್ಯೆ ಮತ್ತು ಮತಾಂತರಕ್ಕೆ ಕಾನೂನು ಏಕೆ ಇಲ್ಲ. ಹಿಂದೂಗಳು ಒಂದಾಗದಿದ್ದರೆ ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗುವುದಿಲ್ಲ ಎಂದು ಎಚ್ಚರಿಸಿದರು.
ಕಾಯ್ದೆಗಳ ಜಾರಿಗೆ ಅಂಗೀಕಾರ: ಮತಾಂತರ ನಿಷೇಧ ಕಾಯ್ದೆ ಜಾರಿ, ವಕ್ಫ್ ಮಂಡಳಿ ಕಾಯ್ದೆ ರದ್ದು, ಲವ್ ಜಿಹಾದ್ ವಿರೋಧಿ ಕಾಯ್ದೆಗೆ ಅನುಮೋದನೆ, ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಬೇಕು ಎಂಬ ವಿವಿಧ ನಿರ್ಣಯಗಳನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.
ಧಾರ್ಮಿಕ ಸಭೆಯಲ್ಲಿ ಬಾಲಯೋಗಿ ಸದಾನಂದ ಮಹಾರಾಜ್, ಮಹಾಂತ ಶಿರ್ ಚಿದಾನಂದ ಸರಸ್ವತಿ, ಸ್ವಾಮಿ ಗೋವಿಂದಗಿರಿ, ಮಹಾಂತ್ ಫುಲ್ನಾಥ್ ಬಾಬಾ, ಸಂಘಟಕ ಶಿವರೂಪಾನಂದ ಸ್ವಾಮಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು; ಪಟ್ಟಣ ಪಂಚಾಯತ್ ಸದಸ್ಯೆ ಪತಿಯ ಭೀಕರ ಕೊಲೆ - MURDER CASE