ಜಬಲ್‌ಪುರ (ಮಧ್ಯಪ್ರದೇಶ): ಕಾಂಗ್ರೆಸ್‌ನ ಹಿರಿಯ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಮುಂದಿನ ರಾಜಕೀಯ ನಡೆ ಇನ್ನೂ ಸಾಕಷ್ಟು ಸಸ್ಪೆನ್ಸ್ ಮುಂದುವರೆದಿದೆ. ಇದರ ನಡುವೆಯೇ ಬಿಜೆಪಿಗೆ ಕಮಲ್‌ನಾಥ್ ಅಗತ್ಯವಿಲ್ಲ. ಅವರಿಗೆ ಪಕ್ಷದ ಬಾಗಿಲು ಮುಚ್ಚಲಾಗಿದೆ ಎಂದು ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯವರ್ಗಿಯ ತಿಳಿಸಿದ್ದಾರೆ.
ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಜಯವರ್ಗಿಯ ಸುದ್ದಿಗಾರರೊಂದಿಗೆ ಮಾತನಾಡುತ್ತ, ಕಾಂಗ್ರೆಸ್ ಕಮಲ್‌ನಾಥ್ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ನಮ್ಮ ಪಕ್ಷಕ್ಕೆ ಕಮಲ್ ನಾಥ್ ಅಗತ್ಯವಿಲ್ಲ ಎಂದು ನಾನು ಮೊದಲೇ ಹೇಳಿದ್ದೆ. ಅದಕ್ಕಾಗಿಯೇ ಅವರಿಗೆ ಪಕ್ಷದ ಬಾಗಿಲು ಮುಚ್ಚಲಾಗಿದೆ ಎಂದು ತಿಳಿಸಿದರು.
77 ವರ್ಷದ ಹಿರಿಯ ಕಾಂಗ್ರೆಸ್ ನಾಯಕ ಕಮಲ್‌ನಾಥ್, ಪುತ್ರ ನಕುಲ್ನಾಥ್ ಬಿಜೆಪಿ ಸೇರುತ್ತಾರೆ ಎಂಬುದು ಸಾಕಷ್ಟು ಸುದ್ದಿಯಾಗಿದೆ. ಮಧ್ಯಪ್ರದೇಶ, ಮಾತ್ರವಲ್ಲದೇ ದೇಶಾದ್ಯಂತ ಇದು ಸಾಕಷ್ಟು ಚರ್ಚೆಯನ್ನೂ ಹುಟ್ಟುಹಾಕಿದೆ. ಅದರಲ್ಲೂ, ಕಳೆದ ವಾರ ದೆಹಲಿಗೆ ಕಮಲ್‌ನಾಥ್ ದಿಢೀರ್ ಆಗಿ ಭೇಟಿ ನೀಡಿದ್ದ ಬಳಿಕ ಈ ಊಹಾಪೋಹಗಳಿಗೆ ಪೃಷ್ಟಿ ಕೊಟ್ಟಿತ್ತು.
ಆದರೆ, ಆಗ ಪ್ರತಿಕ್ರಿಯಿಸಿದ್ದ ಕಮಲ್‌ನಾಥ್, ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ, ಅದನ್ನು ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದು ಹೇಳಿದ್ದರು. ಅಲ್ಲದೇ, ನಂತರದಲ್ಲಿ ದಿಗ್ವಿಜಯ ಸಿಂಗ್ ಹಾಗೂ ಕಮಲ್‌ನಾಥ್ ಆಪ್ತ ಸಜ್ಜನ್ ಸಿಂಗ್ ವರ್ಮಾ ಸೇರಿ ಇತರ ಕಾಂಗ್ರೆಸ್ ನಾಯಕರು ಸಹ ಕಮಲ್‌ನಾಥ್ ಬಿಜೆಪಿ ಸೇರುವ ವದಂತಿಯನ್ನು ತಳ್ಳಿಹಾಕಿದ್ದರು.
ಮತ್ತೊಂದೆಡೆ, ಕಮಲ್‌ನಾಥ್ ಅವರ ಭದ್ರಕೋಟೆಯಾದ ಛಿಂದ್ವಾರಾ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಲವಾರು ಸ್ಥಳೀಯ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ, ಕಾಂಗ್ರೆಸ್ ಪಕ್ಷದಲ್ಲಿನ ಅನೇಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರೆಲ್ಲೂ ಪಕ್ಷಕ್ಕೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ಛಿಂದ್ವಾರಾ ಕ್ಷೇತ್ರವು ರಾಜಕೀಯವಾಗಿ ಕಾಂಗ್ರೆಸ್ಗೆ ಮಹತ್ವದ ಕ್ಷೇತ್ರ. ಕಮಲ್‌ನಾಥ್ ಇಲ್ಲಿಂದಲೇ 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಅವರ ಪುತ್ರ ನಕುಲ್ನಾಥ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 29ರ ಪೈಕಿ 28 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಛಿಂದ್ವಾರಾದ ಮತದಾರರು ಮಾತ್ರ ಕಾಂಗ್ರೆಸ್ ಅಭ್ಯರ್ಥಿಯ ಕೈಹಿಡಿದ್ದರು. ಇದೇ ಕಾರಣಕ್ಕೆ ಛಿಂದ್ವಾರಾ ಕಾಂಗ್ರೆಸ್ ಹಾಗೂ ಕಮಲ್‌ನಾಥ್ ಅವರ ಭದ್ರಕೋಟೆ ಎಂದೇ ಕರೆಯಲಾಗುತ್ತದೆ.
ಇದನ್ನೂ ಓದಿ: ಕಮಲ್‌ನಾಥ್ ಬಿಜೆಪಿ ಸೇರ್ಪಡೆಗೆ ಪುಷ್ಟಿ: ಕಮಲ ಪಕ್ಷ ಸೇರಿದ ಮಾಜಿ ಸಿಎಂ ಕ್ಷೇತ್ರದ ಕಾಂಗ್ರೆಸ್ಸಿಗರು