ಮುಜಾಫರ್‌ಪುರ (ಬಿಹಾರ): ಬಿಹಾರದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. 29 ಜಿಲ್ಲೆಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿವೆ. ಇಲ್ಲಿನ ಜನರನ್ನು ರಕ್ಷಿಸಲು ವಾಯುಪಡೆ ಕಾರ್ಯಾಚರಣೆ ನಡೆಸುತ್ತಿದ್ದು, ಈ ವೇಳೆ ಸೇನಾ ಹೆಲಿಕಾಪ್ಟರ್ ತಾಂತ್ರಿಕ ದೋಷಕ್ಕೀಡಾಗಿ ನೀರಿಗೆ ಬಿದ್ದಿದೆ. ಅದೃಷ್ಟವಶಾತ್, ಎಲ್ಲ ಸೇನಾ ಸಿಬ್ಬಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಜಾಫರ್ಪುರದಲ್ಲಿ ರಕ್ಷಣಾ ಕಾರ್ಯ ಮತ್ತು ಜನರಿಗೆ ಆಹಾರ ಪೊಟ್ಟಣ ವಿತರಿಸಲು ಬಂದಿದ್ದ ಸೇನಾ ಹೆಲಿಕಾಪ್ಟರ್ ಇಂಜಿನ್ ವೈಫಲ್ಯಕ್ಕೀಡಾಗಿದೆ. ತಕ್ಷಣವೇ ಪೈಲಟ್ ನಿಯಂತ್ರಿಸಲು ಯತ್ನಿಸಿದರೂ, ಸಾಧ್ಯವಾಗದೇ ಪ್ರವಾಹದ ನೀರಿನಲ್ಲಿ ಬಿದ್ದಿದೆ. ಇದರಿಂದ ಹೆಲಿಕಾಪ್ಟರ್ ಹಾನಿಗೀಡಾಗಿದೆ.
ಮಾಹಿತಿ ಪಡೆದ ಸ್ಥಳೀಯ ಮುಳುಗುಗಾರರು ಮತ್ತು ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದೆ. ಹೆಲಿಕಾಪ್ಟರ್ನ ಪೈಲಟ್ ಗಾಯಗೊಂಡಿದ್ದು, ಜೊತೆಗಿದ್ದ ಸಿಬ್ಬಂದಿ ಸಣ್ಣಪುಟ್ಟ ಗಾಯಕ್ಕೀಡಾಗಿದ್ದಾರೆ. ಪೈಲಟ್ ಮತ್ತು ಗಾಯಗೊಂಡ ಸೈನಿಕರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡದ ಕುರಿತು ವಿಪತ್ತು ನಿರ್ವಹಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರತ್ಯಯ ಅಮೃತ್ ಖಚಿತಪಡಿಸಿದ್ದಾರೆ.
ಬಿಹಾರದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ರಾಜ್ಯದ 29 ಜಿಲ್ಲೆಗಳು ಹಾನಿಗೊಳಗಾಗಿವೆ. ಕೋಸಿ, ಗಂಡಕ್, ಕಮಲಾ ಬಾಲನ್ ಮುಂತಾದ ನದಿಗಳು ಉಕ್ಕಿ ಹರಿಯುತ್ತಿವೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಮತ್ತು ಸೇನೆಯ ನೆರವು ಕೇಳಿದ್ದು, ಪ್ರವಾಹದಲ್ಲಿ ಸಿಲುಕಿದ ಜನರನ್ನು ವಾಯುಪಡೆಯ ತಂಡ ರಕ್ಷಣೆ ಮಾಡುವ ಕಾರ್ಯ ನಡೆಸುತ್ತಿದೆ.
ಇದನ್ನೂ ಓದಿ: ಪುಣೆಯಲ್ಲಿ ಹೆಲಿಕಾಪ್ಟರ್ ಪತನ: ಇಂಜಿನಿಯರ್, ಇಬ್ಬರು ಪೈಲಟ್ಗಳು ಸಾವು - HELICOPTER CRASH