ಭಾಗಲ್ಪುರ್ (ಬಿಹಾರ): ಭಾಗಲ್ಪುರದ ಲೋದಿಪುರದಲ್ಲಿ ಸರಸ್ವತಿ ದೇವಿಯ ಪ್ರತಿಮೆಯನ್ನು ವಿಸರ್ಜಿಸುವ ಮಾರ್ಗದಲ್ಲಿ ಶುಕ್ರವಾರ ಕಲ್ಲು ತೂರಾಟ ನಡೆಸಿದ ಬಳಿಕ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಸದ್ಯ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಲೋದಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ವಿಗ್ರಹ ವಿಸರ್ಜನೆ ಮಾಡುವ ಸಮಯದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದೆ. ಈಗ ವಿಗ್ರಹ ವಿಸರ್ಜನೆಯನ್ನು ಶಾಂತಿಯುತವಾಗಿ ನಡೆಸಲಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಭಾಗಲ್ಪುರ ಎಸ್ಪಿ ರಾಜ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಜೊತೆಗೆ ಬಿಹಾರದಲ್ಲಿ ಇದೇ ರೀತಿಯ ಘಟನೆಯಲ್ಲಿ, ಶುಕ್ರವಾರ ದರ್ಭಾಂಗಾದ ಬಹೇರಾ ಮಾರುಕಟ್ಟೆಯಲ್ಲಿ ಸರಸ್ವತಿ ದೇವಿಯ ಪ್ರತಿಮೆಯನ್ನು ವಿಸರ್ಜಿಸುವ ಮಾರ್ಗದಲ್ಲಿ ಕಲ್ಲು ತೂರಾಟ ನಡೆಸಿದ ನಂತರ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದರ್ಬಂಗಾ ಜಿಲ್ಲಾ ಮ್ಯಾಜಿಸ್ಟ್ರೇಟ್, ಎಸ್‌ಎಸ್‌ಪಿ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತಂದರು.
ಮತ್ತೊಂದೆಡೆ, ಬಹೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಗ್ರಹ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ ಎಂದು ಡಿಎಂ ರಾಜೀವ್ ರೌಷನ್ ಸುದ್ದಿಗಾರರಿಗೆ ಹೇಳಿದ್ದಾರೆ.
ಗುರುವಾರ ಮುಂಜಾನೆ, ಬಿಹಾರದ ದರ್ಭಾಂಗ ಜಿಲ್ಲೆಯ ಮುರಿಯಾ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ವಿಗ್ರಹ ವಿಸರ್ಜನೆ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ಘಟನೆಯಲ್ಲಿ ಭಾಗಿಯಾದವರನ್ನು ಗುರುತಿಸಲಾಗುತ್ತಿದೆ. ಸದ್ಯಕ್ಕೆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರುವ ಬಗ್ಗೆ ಮಾಹಿತಿ ಇಲ್ಲ. ಕೆಲವರನ್ನು ಬಂಧಿಸಲಾಗಿದೆ" ಎಂದು ದರ್ಭಾಂಗ ಡಿಎಂ ತಿಳಿಸಿದ್ದಾರೆ.
ಇದನ್ನೂ ಓದಿ: ಗಾಲಿಕುರ್ಚಿ ಕೊರತೆ, ನಡೆದು ಹೋಗುವಾಗ ಹೃದಯಾಘಾತದಿಂದ 80ರ ವೃದ್ಧ ಸಾವು: ಏರ್ ಇಂಡಿಯಾಗೆ ನೋಟಿಸ್