ಭುವನೇಶ್ವರ್, ಒಡಿಶಾ: ರಾಜಧಾನಿ ಭುವನೇಶ್ವರದಲ್ಲಿ ನಿನ್ನೆ 43.5 ರಷ್ಟು ತಾಪಮಾನ ದಾಖಲಾಗಿದೆ. ಇನ್ನು ಕರ್ನಾಟಕದ ಕಲಬುರಗಿಯಲ್ಲೂ ಸಹ 43.3 ರಷ್ಟು ತಾಪಮಾನ ಇತ್ತು. ಭುವನೇಶ್ವರ್ ಇದೀಗ ಏಷ್ಯಾ ಖಂಡದ ಅತ್ಯಂತ ಹೆಚ್ಚು ತಾಪಮಾನ ದಾಖಲಾದ 6ನೇ ನಗರ ಎಂಬ ಖ್ಯಾತಿಗೆ ಒಳಗಾಗಿದೆ.
ಇನ್ನು ಮ್ಯಾನ್ಮಾರ್ನ ಚೌಕ್ ಎಂಬಲ್ಲಿ ಬರೋಬ್ಬರಿ 45.7 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗುವ ಮೂಲಕ ಅತ್ಯಂತ ಹೆಚ್ಚು ತಾಪಮಾನ ದಾಖಲಾದ ಸ್ಥಳವಾಗಿ ಗುರುತಿಸಿಕೊಂಡಿದೆ. ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಉಮಾಶಂಕರ್ ದಾಸ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಏಷ್ಯಾದ 10 ದೇಶಗಳ ಅತ್ಯಂತ ಬಿಸಿಯಾದ ಸ್ಥಳಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮ್ಯಾನ್ಮಾರ್ನ ನಾಲ್ಕು ಸ್ಥಳಗಳು ಟಾಪ್ 5ರಲ್ಲಿ ಗುರುತಿಸಿಕೊಂಡಿವೆ.
ಆಂಧ್ರಪ್ರದೇಶದ ನಂದ್ಯಾಲ್ದಲ್ಲಿ 43.7 ರಷ್ಟು ತಾಪಮಾನ ದಾಖಲಾಗಿದೆ, ಏಪ್ರಿಲ್ 5 ರಂದು ದೇಶದಲ್ಲೇ ಅತ್ಯಂತ ಹೆಚ್ಚು ತಾಪಮಾನ ದಾಖಲಾದ ಸ್ಥಳವಾಗಿದೆ. ಏಷ್ಯಾದಲ್ಲೇ 4 ನೇ ಅತ್ಯಂತ ಬಿಸಿಯಾದ ಸ್ಥಳ ಎಂದು ಪಟ್ಟಿ ಮಾಡಲಾಗಿದೆ. IMD ಒದಗಿಸಿದ ದಿನದ ಅಂತ್ಯದ ಮಾಹಿತಿಯ ಪ್ರಕಾರ, ಭುವನೇಶ್ವರದಲ್ಲಿ ಇಂದು 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮಧ್ಯಾಹ್ನ 2:30 ರ ಹೊತ್ತಿಗೆ ಒಡಿಶಾದ ರಾಜಧಾನಿಯಲ್ಲಿ 43.3 ಸೆಲ್ಸಿಯಸ್ ತಾಪಮಾನವನ್ನು ಮುಟ್ಟಿತ್ತು.
IMD ಮುಂದಿನ 24 ಗಂಟೆಗಳಲ್ಲಿ ಒಡಿಶಾದ 14 ಜಿಲ್ಲೆಗಳಲ್ಲಿ ಉಷ್ಣ ಅಲೆಯ ಬಗ್ಗೆ ಹಳದಿ ಎಚ್ಚರಿಕೆಯನ್ನು ನೀಡಿದೆ. ಭುವನೇಶ್ವರ್ದಲ್ಲಿ ಶುಕ್ರವಾರ ಏಷ್ಯಾದ ಆರನೇ ಅತ್ಯಂತ ಬಿಸಿಯಾದ ಸ್ಥಳವಾಗಿದೆ ಎಂದು IMD ಭುವನೇಶ್ವರ್ ವಿಜ್ಞಾನಿ ಉಮಾಶಂಕರ್ ದಾಸ್ ಮಾಹಿತಿ ನೀಡಿದ್ದಾರೆ.
ದಾಸ್ ತಮ್ಮ X ಹ್ಯಾಂಡಲ್‌ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವರ ಎಕ್ಸ್ ಹ್ಯಾಂಡಲ್‌ನಲ್ಲಿ ಏಷ್ಯಾದ 10 ಅತ್ಯಂತ ಬಿಸಿಯಾದ ಸ್ಥಳಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.
ಇನ್ನು ಕರ್ನಾಟಕದ ಕಲಬುರಗಿಯಲ್ಲಿ ಸುಮಾರು 43.3 ರಷ್ಟು ತಾಪಮಾನ ದಾಖಲಾಗುವ ಮೂಲಕ 9ನೇ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಕರ್ನಾಟಕದ ಬಹುತೇಕ ಕಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಕಡೆ ಬಿಸಿಗಾಳಿ ಬೀಸುತ್ತಿದೆ. ರಾಜ್ಯದ ಜನರು ನೀರಿಗಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಜನರು ಮನೆಯಿಂದ ಹೊರಗೆ ಬರುವುದನ್ನು ತಪ್ಪಿಸಿ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ಹಾಗೂ ಮನವಿಯನ್ನೂ ಕೂಡಾ ಮಾಡಿಕೊಂಡಿದೆ.
ಇದನ್ನು ಓದಿ: ಕರ್ನಾಟಕ, ಒಡಿಶಾ, ಆಂಧ್ರದಲ್ಲಿ ಶಾಖದ ಅಲೆ, ಈಶಾನ್ಯದಲ್ಲಿ ಮಳೆ: ಐಎಂಡಿ ಮುನ್ಸೂಚನೆ - IMD Wednesday morning bulletin