ಬಲಿಯಾ (ಉತ್ತರ ಪ್ರದೇಶ): ಶಾಲೆಯಿಂದ ಹಿಂತಿರುಗುತ್ತಿದ್ದ 11ನೇ ತರಗತಿಯ ವಿದ್ಯಾರ್ಥಿನಿಗೆ ಮೂವರು ಯುವಕರು ಲೈಂಗಿಕ ಕಿರುಕುಳ ನೀಡಿ, ಆಕೆಯನ್ನು ತೀವ್ರವಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ. ದೌರ್ಜನ್ಯವನ್ನು ವಿರೋಧಿಸಿದ ವಿದ್ಯಾರ್ಥಿನಿಯನ್ನು ಎಳೆದುಕೊಂಡು ಹೋಗಿ ಕಾಲುವೆಗೆ ತಳ್ಳಿ, ತೀವ್ರವಾಗಿ ಥಳಿಸಲಾಗಿದೆ . ಕಿರುಚಾಟವನ್ನು ಕೇಳಿ ಸುತ್ತಮುತ್ತಲಿನ ಜನ ಆಗಮಿಸಿ ಆಕೆಯನ್ನು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯನ್ನು ಮೊದಲಿಗೆ ಖೇಜೂರಿ ಪ್ರಾಥಮಿಕ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ನಂತರ ವೈದ್ಯರ ಸಲಹೆಯ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಕಡಿ ಪೊಲೀಸ್ ಠಾಣೆ ಪ್ರದೇಶದ ಜಗದಾರಾ ಚಟ್ಟಿಯಿಂದ ಸುಮಾರು 100 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.
"ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಸಂತ್ರಸ್ತೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ. ಕುಟುಂಬ ಸದಸ್ಯರು ಮತ್ತು ಪೊಲೀಸರು ಸ್ಥಳದಲ್ಲಿದ್ದಾರೆ. ಕುಟುಂಬದವರು ನೀಡಿದ ದೂರಿನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಪರಿಚಿತ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಸರ್ಕಲ್ ಆಫೀಸರ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು" ಎಂದು ಠಾಣಾಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ : ಹೇಮಾ ಕಮಿಟಿ ಮುಂದೆ ಸಾಕ್ಷ್ಯ ನುಡಿದ 50 ಜನರನ್ನು ಭೇಟಿಯಾಗಲಿದೆ ಎಸ್ಐಟಿ: 10 ದಿನಗಳಲ್ಲಿ ಪ್ರಕ್ರಿಯೆ ಪೂರ್ಣ - Hema Committee Report