ಮುಂಬೈ (ಮಹಾರಾಷ್ಟ್ರ): ಮಾಜಿ ಸಚಿವ ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ನಾಯಕ ಬಾಬಾ ಸಿದ್ದಿಕ್ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಭೂಗತ ಪಾತಕಿಗಳೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಹೇಳಿದೆ.
ಬಾಬಾ ಸಿದ್ದಿಕ್ ಹತ್ಯೆಯ ಆರೋಪಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್, ಭೂಗತ ಪಾತಕಿಗಳಾದ ಅನುಜ್ ಥಾಪನ್ ಮತ್ತು ದಾವೂದ್ ಇಬ್ರಾಹಿಂ ಅವರೊಂದಿಗಿನ ಸಂಪರ್ಕದಿಂದಾಗಿ 66 ವರ್ಷದ ನಾಯಕನನ್ನು ಕೊಲ್ಲಲಾಗಿದೆ ಎಂದು ಹೇಳಿದ್ದಾನೆ. ವೈರಲ್ ಪೋಸ್ಟ್ ಅನ್ನು ಪರಿಶೀಲಿಸಲಾಗುತ್ತಿದೆ. ಸತ್ಯಾಸತ್ಯತೆ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈರಲ್ ಪೋಸ್ಟ್ನಲ್ಲಿ ಬರೆದಿದ್ದೇನು?: ಶುಬು ಲೊಂಕರ್ ಎಂಬ ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. "ಓಂ, ಜೈ ಶ್ರೀ ರಾಮ್, ಜೈ ಭಾರತ. ನಾನು ಜೀವನದ ಮೌಲ್ಯವನ್ನು ಅರ್ಥಮಾಡಿಕೊಂಡಿದ್ದೇನೆ. ಸಂಪತ್ತು ಮತ್ತು ದೇಹವನ್ನು ಧೂಳಿನ ಸಮನಾಗಿ ಕಾಣುತ್ತೇನೆ. ನಾನು ಸರಿಯಾದದ್ದನ್ನು ಮಾತ್ರ ಮಾಡಿದ್ದೇನೆ. ಸ್ನೇಹದ ಕರ್ತವ್ಯವನ್ನು ಗೌರವಿಸಿದೆ. ಸಲ್ಮಾನ್ ಖಾನ್ ಮತ್ತು ನಮ್ಮವರ ನಡುವೆ ಯುದ್ಧ ಬಯಸಿರಲಿಲ್ಲ. ಬಾಬಾ ಸಿದ್ದಿಕ್ ಅವರನ್ನು ನೀವು ಹೊಗಳಿದ್ದೀರಿ. ದಾವೂದ್‌ನೊಂದಿಗೆ ಗುರುತಿಸಿಕೊಂಡಿದ್ದೀರಿ. ಬಾಲಿವುಡ್, ರಾಜಕೀಯ ಮತ್ತು ಆಸ್ತಿ ವ್ಯವಹಾರಗಳು ನಡೆದಿವೆ" ಎಂದೆಲ್ಲಾ ಬರೆದುಕೊಳ್ಳಲಾಗಿದೆ.
"ನಮಗೆ ಯಾರೊಂದಿಗೂ ದ್ವೇಷವಿಲ್ಲ. ಆದರೆ, ನಟ ಸಲ್ಮಾನ್ ಖಾನ್ ಅಥವಾ ದಾವೂದ್ ಗ್ಯಾಂಗ್‌ಗೆ ಸಹಾಯ ಮಾಡಿದಲ್ಲಿ ನಾವು ಅಂಥವರಿಗೆ ಖಂಡಿತವಾಗಿಯೂ ಪಾಠ ಕಲಿಸುತ್ತೇವೆ. ನಾವಾಗಿಯೇ ಮೊದಲು ಜಗಳ ಮಾಡುವುದಿಲ್ಲ. ಜೈ ಶ್ರೀರಾಮ್, ಜೈ ಭಾರತ್, ಮಡಿದವರಿಗೆ ನಮನಗಳು ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ಆರೋಪಿಗಳಿಗಾಗಿ ಹುಡುಕಾಟ: ಮಾಜಿ ಸಚಿವನ ಕೊಲೆಯಲ್ಲಿ ಭಾಗಿಯಾದ ಮೂವರು ಶೂಟರ್‌ಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಗುರ್ಮೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳನ್ನು ಮುಂಬೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮೂರನೇ ಶೂಟರ್ ಶಿವಕುಮಾರ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ವ್ಯಕ್ತಿಯೂ ಕೃತ್ಯದಲ್ಲಿ ಭಾಗಿಯಾಗಿದ್ದು, ಇಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಕಾಂಗ್ರೆಸ್ ತೊರೆದು ಇತ್ತೀಚೆಗೆ ಅಜಿತ್ ಪವಾರ್ ಅವರ ಎನ್‌ಸಿಪಿ ಸೇರಿದ್ದ ಬಾಬಾ ಸಿದ್ದಿಕ್ ಅವರನ್ನು ಶನಿವಾರ ರಾತ್ರಿ ಮುಂಬೈನ ಬಾಂದ್ರಾದಲ್ಲಿ ಅವರ ಪುತ್ರ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಮಾರಣಾಂತಿಕವಾಗಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಎನ್‌ಸಿಪಿ ನಾಯಕನ ಪಾರ್ಥಿವ ಶರೀರವನ್ನು ಮರೈನ್ ಲೈನ್ಸ್ ಪ್ರದೇಶದ ಸ್ಮಶಾನದಲ್ಲಿ ಸಮಾಧಿ ಮಾಡಲಾಗುವುದು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಬಾಬಾ ಸಿದ್ದಿಕಿ ಅಂತ್ಯಕ್ರಿಯೆ: ಮಹಾರಾಷ್ಟ್ರ ಸಿಎಂ ಶಿಂದೆ ಘೋಷಣೆ