ಅಯೋಧ್ಯೆ: ಅಯೋಧ್ಯಾಧೀಶ ಪ್ರಭು ಶ್ರೀರಾಮನ ಕಾಣಲು ದೇಶದ ಮೂಲೆ ಮೂಲೆಗಳಿಂದ ಭಕ್ತರು ದಂಡು ಪ್ರವಾಹೋಪಾದಿಯಲ್ಲಿ ಬರುತ್ತಿರುವ ಹಿನ್ನೆಲೆ, ದರ್ಶನದ ಅವಧಿಯನ್ನು ವಿಸ್ತರಿಸಲಾಗಿದೆ. ಅಯೋಧ್ಯೆಯಲ್ಲಿ ಸದ್ಯ ಉಳಿದುಕೊಂಡಿರುವ ಭಕ್ತರ ಸಂಖ್ಯೆ ಇನ್ನೂ ಕರಗಿಲ್ಲ. ಹೀಗಾಗಿ ಅಪಾರ ಜನಸ್ತೋಮವನ್ನು ಗಮನದಲ್ಲಿಟ್ಟುಕೊಂಡು ರಾತ್ರಿ 10ರ ಬದಲು 11ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಡಿಜಿ ಪ್ರಶಾಂತ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಅಯೋಧ್ಯೆಯಲ್ಲಿ ಲಕ್ಷಗಟ್ಟಲೇ ಜನರು ರಾಮನ ದರ್ಶನಕ್ಕಾಗಿ ಕಾದಿದ್ದಾರೆ. ಹೀಗಾಗಿ ದರ್ಶನದ ಸಮಯವನ್ನು ರಾತ್ರಿ ವೇಳೆ ವಿಸ್ತರಿಸಲಾಗಿದೆ. ಜನಸಂದಣಿ ಮುಗಿಯುವವರೆಗೆ ದೇವಾಲಯದ ಬಾಗಿಲು ತೆರೆದಿರುತ್ತದೆ. ರಾತ್ರಿ 11 ಗಂಟೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುವುದು ಎಂದು ತಿಳಿಸಿದರು.
ಜನವರಿ 23 ರಂದು 5 ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯೆಗೆ ಅಪಾರ ಭಕ್ತರ ದಂಡು ಹರಿದು ಬರುತ್ತಿದೆ. ಎಲ್ಲೆಲ್ಲೂ ಜನಜಂಗುಳಿ ಕಾಣುತ್ತಿದೆ. ಸ್ಥಳೀಯ ಆಡಳಿತದೊಂದಿಗೆ ಬಿಗಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಮಂಗಳವಾರದ ಭಕ್ತಸ್ತೋಮ ಕಂಡು ರಾಮಮಂದಿರದ ದರ್ಶನದ ಅವಧಿಯನ್ನು ಹೆಚ್ಚಿಸಲಾಗಿದೆ. ಇದೀಗ ದೇವಾಲಯವು ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಆರತಿ ಸಮಯದಲ್ಲಿ ಮುಚ್ಚಿ ಬಳಿಕ ರಾತ್ರಿ 11 ರವರೆಗೆ ತೆರೆದಿರುತ್ತದೆ ಎಂದು ಹೇಳಿದರು.
ಪೊಲೀಸ್ ಭದ್ರತೆಯೂ ವಿಸ್ತರಣೆ: ಲಕ್ಷಾಂತರ ಜನರು ಏಕಕಾಲಕ್ಕೆ ಅಯೋಧ್ಯೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದ್ದ ಪೊಲೀಸರ ಅವಧಿಯನ್ನೂ ವಿಸ್ತರಿಸಲಾಗಿದೆ. ನಿಯೋಜನೆಗೊಂಡಿರುವ ಭದ್ರತಾ ಪಡೆಗಳ ಕರ್ತವ್ಯವನ್ನು ಜನವರಿ 25 ರವರೆಗೆ ಮುಂದೂಡಲಾಗಿದೆ ಎಂದು ಅವರು ಹೇಳಿದರು.
ಇದಲ್ಲದೇ, ಅಯೋಧ್ಯೆಗೆ ಬರುವ ಗಣ್ಯರು, ವಿವಿಐಪಿಗಳು ಭೇಟಿ ನೀಡುವ ದಿನಾಂಕವನ್ನು ಮೊದಲೇ ಮಾಹಿತಿ ನೀಡಬೇಕು ಎಂಬ ನಿಯಮವನ್ನೂ ರೂಪಿಸಲಾಗಿದೆ. ರಘುರಾಮನ ದರ್ಶನ ಮಾಡಬೇಕಾದರೆ, ನಿಗದಿತ ದಿನವನ್ನ 10 ದಿನ ಮುಂಚಿತವಾಗಿಯೇ ಜಿಲ್ಲಾಡಳಿತ, ಪೊಲೀಸರು ಅಥವಾ ಟ್ರಸ್ಟ್‌ಗೆ ಮಾಹಿತಿ ನೀಡಬೇಕು. ನೇರವಾಗಿ ಮಂದಿರ ಭೇಟಿ ನೀಡಿದಲ್ಲಿ ವ್ಯವಸ್ಥೆ ಮಾಡಲು ಅಸಾಧ್ಯ ಎಂದು ತಿಳಿಸಿದರು.
ದರ್ಶನ, ಆರತಿ ಸಮಯ: ಭವ್ಯ ರಾಮ ಮಂದಿರವು ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ರಾತ್ರಿ 11 ರವರೆಗೆ ದರ್ಶನಕ್ಕಾಗಿ ತೆರೆದಿರುತ್ತದೆ. ಬೆಳಗಿನ ಜಾವ 4.30ರಿಂದ 5ರ ನಡುವೆ ರಾಮನಿಗೆ ಮಂಗಳಾರತಿ ನಡೆಯಲಿದೆ. ಇದಲ್ಲದೇ ಬೆಳಗ್ಗೆ 6.30ಕ್ಕೆ ಶೃಂಗಾರ ಆರತಿ ಹಾಗೂ ಮಧ್ಯಾಹ್ನ 12 ಗಂಟೆಗೆ ಭೋಗ್ ಆರತಿ, ಸಂಜೆ 7.30ಕ್ಕೆ ಸಂಧ್ಯಾ ಆರತಿ ನಡೆಯಲಿದೆ. ದೇವಸ್ಥಾನವು ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಮುಚ್ಚಿರುತ್ತದೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದ ಗರ್ಭಗುಡಿ ಪ್ರವೇಶಿಸಿದ ಕೋತಿ: ಸಾಕ್ಷಾತ್ ಹನುಮಂತನೇ ಬಂದ ಎಂದು ಭಕ್ತರ ಸಂತಸ