ಅಯೋಧ್ಯೆ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಪ್ರಸಿದ್ಧ ಹನುಮಾನ್‌ಗರ್ಹಿ ದೇವಸ್ಥಾನದ ಪ್ರಧಾನ ಅರ್ಚಕ ರಾಜು ದಾಸ್ ಅವರ ಪೊಲೀಸ್ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ. ಇತ್ತೀಚೆಗೆ ಇಬ್ಬರು ಸಚಿವರು ಕರೆದಿದ್ದ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಅರ್ಚಕ ರಾಜು ದಾಸ್ ನಡುವೆ ವಾಗ್ವಾದ ನಡೆದಿತ್ತು. ಈ ಬೆಳವಣಿಗೆ ನಂತರ ಅವರ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯನ್ನು ತೆಗೆದುಹಾಕಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿದೆ. ಇದರ ಪರಾಮರ್ಶೆ ಮಾಡಲು ಉತ್ತರ ಪ್ರದೇಶದ ಸಚಿವರಾದ ಜೈ ವೀರ್ ಸಿಂಗ್ ಮತ್ತು ಸೂರ್ಯ ಪ್ರತಾಪ್ ಶಾಹಿ ಗುರುವಾರ ಸಂಜೆ ಸಭೆ ಕರೆದಿದ್ದರು. ಈ ಸಭೆಯಲ್ಲಿ ಅರ್ಚಕ ರಾಜು ದಾಸ್ ಮತ್ತು ಅಯೋಧ್ಯೆ ಮೇಯರ್ ಗಿರೀಶ್ಪತಿ ತ್ರಿಪಾಠಿ ಸಹ ಪಾಲ್ಗೊಂಡಿದ್ದರು.
ಬಳಿಕ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆಸಲು ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಮತ್ತು ಹಿರಿಯ ಪೊಲೀಸ್ ಅಧೀಕ್ಷಕ ರಾಜ್ ಕರಣ್ ನಯ್ಯರ್ ಸೇರಿದಂತೆ ಜಿಲ್ಲೆಯ ಅಧಿಕಾರಿಗಳನ್ನು ಸಭೆಗೆ ಕರೆಸಲಾಗಿತ್ತು. ಈ ಸಭೆಯಲ್ಲಿ ಬಿಜೆಪಿಯ ಸೋಲಿಗೆ ದಾಸ್ ಅವರನ್ನು ದೂಷಿಸಲಾಗಿತ್ತು. ಇದು ರಾಜ್ ದಾಸ್ ಮತ್ತು ಅಧಿಕಾರಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಅರ್ಚಕ ರಾಜು ದಾಸ್ ಅವರಿಗೆ ಮೂವರು ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಯ ಭದ್ರತೆಯ ಇತ್ತು. ಆದರೆ, ಈ ವಾಗ್ವಾದದ ಬಳಿಕ ಶುಕ್ರವಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಅರ್ಚಕ ರಾಜು ದಾಸ್ ಅವರ ಪೊಲೀಸ್ ಭದ್ರತೆ ಹಿಂಪಡೆಯಲಾಗಿದೆ.
ಅರ್ಚಕರ ಬಗ್ಗೆ ಡಿಸಿ ಹೇಳಿದ್ದೇನು?: ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಅವರು ಅರ್ಚಕ ರಾಜು ದಾಸ್ ಭದ್ರತೆ ಹಿಂಪಡೆದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮಹಂತ್ ರಾಜು ದಾಸ್ ವಿರುದ್ಧ ಹಲವು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ತಮ್ಮ ಭದ್ರತೆಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ, ವಿಶೇಷವಾಗಿ ವ್ಯಾಪಾರಸ್ಥರಿಗೆ ಬೆದರಿಕೆ ಹಾಕಿರುವ ಬಗ್ಗೆ ನಮಗೆ ದೂರುಗಳು ಬಂದಿದ್ದವು. ಇದು ಘೋರ ದುರ್ಬಳಕೆಯಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅವರ ಭದ್ರತೆಯನ್ನು ತೆಗೆದುಹಾಕಲಾಗಿದೆ ಅವರು ಖಚಿತ ಪಡಿಸಿದ್ದಾರೆ.
ಅರ್ಚಕ ರಾಜು ದಾಸ್ ಪ್ರತಿಕ್ರಿಯೆ ಏನು?: ತಮ್ಮ ಭದ್ರತೆಯನ್ನು ತೆಗೆದುಹಾಕಿರುವ ಕುರಿತು ರಾಜು ದಾಸ್ ಮಾತನಾಡಿ, ಜಿಲ್ಲಾಡಳಿತದ ಅಧಿಕಾರಿಗಳನ್ನು ನಾನು ಕಳ್ಳರು ಮತ್ತು ಭ್ರಷ್ಟರು ಎಂದು ಕರೆದಿದ್ದೆ. ಇದೇ ಕಾರಣಕ್ಕಾಗಿ ನನ್ನ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಫೈಜಾಬಾದ್‌ನಲ್ಲಿ ಬಿಜೆಪಿ ಸೋತ ನಂತರ ದಾಸ್, ಅಯೋಧ್ಯೆಯ ಜನರನ್ನು 'ಶ್ರೀರಾಮನ ದ್ರೋಹಿಗಳು' ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥರು ಸೇರಿದಂತೆ ಎಲ್ಲಾ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಭ್ರಷ್ಟರು ಮತ್ತು ಕಳ್ಳರು. ಲಂಚ ತೆಗೆದುಕೊಳ್ಳದೆ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ಯೋಗಿ ಭೇಟಿಯಾದ ರಾಜು ದಾಸ್: ಇದರ ನಡುವೆ ಲಖನೌದಲ್ಲಿ ಶನಿವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅರ್ಚಕ ರಾಜು ದಾಸ್ ಭೇಟಿ ಮಾಡಿದ್ದರು. ಸಿಎಂ ಭೇಟಿಯ ಕುರಿತು ಕೇಳಲಾದ ಪ್ರಶ್ನೆಗೆ ಅವರು, ನಾವು ಅಯೋಧ್ಯೆಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಚರ್ಚಿಸಿದ್ದೇವೆ. ಅಯೋಧ್ಯೆಯಲ್ಲಿ ಸರ್ಕಾರಿ ಅಧಿಕಾರಿಗಳು ಭ್ರಷ್ಟರು ಮತ್ತು ಅವರು ಲಂಚ ಪಡೆಯದೆ ಯಾವುದೇ ಕೆಲಸ ಮಾಡುವುದಿಲ್ಲ ಎಂಬುದನ್ನು ನಾನು ಸಿಎಂ ಬಳಿಯೂ ತಿಳಿಸಿದ್ದೇನೆ. ಆದರೆ, ನನ್ನ ಭದ್ರತೆಯ ವಿಚಾರವನ್ನು ಸಿಎಂ ಜೊತೆ ಚರ್ಚಿಸಿಲ್ಲ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಗೋಲ್ಡನ್ ಟೆಂಪಲ್ನಲ್ಲಿ ಯೋಗ: ಸೋಷಿಯಲ್ ಮೀಡಿಯಾ ಸ್ಟಾರ್ ಅರ್ಚನಾ ವಿರುದ್ಧ ಕೇಸ್