ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯ ಮತ ಎಣಿಕೆ ತೀವ್ರ ಕುತೂಹಲದತ್ತ ತೆರಳಿದೆ. ಇಂಡಿಯಾ ಒಕ್ಕೂಟ (ಕಾಂಗ್ರೆಸ್+ಎನ್‌ಸಿ) ಮುನ್ನಡೆ ಸಾಧಿಸಿದ್ದು, ಬಿಜೆಪಿ ಹಿನ್ನಡೆ ಕಂಡಿದೆ. ಭಾರೀ ಬಿಗಿ ಭದ್ರತೆ ನಡುವೆ ಮತದಾನ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲರ ಚಿತ್ತ ಕಣಿವೆನಾಡಿನ ಮೇಲೆ ನೆಟ್ಟಿದೆ.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಟ್ರೆಂಡ್‌ಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟವು ಬಹುಮತದತ್ತ ಸಾಗುತ್ತಿದೆ. 90 ಕ್ಷೇತ್ರಗಳ ಪೈಕಿ ಎನ್‌ಸಿ - 40 ಮತ್ತು ಕಾಂಗ್ರೆಸ್ - 8ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಒಟ್ಟಾರೆ ಮೈತ್ರಿ ಕೂಟ 48 ಕ್ಷೇತ್ರಗಳಲ್ಲಿ ಮುಂದಿದೆ. ಬಿಜೆಪಿ - 28, ಸ್ವತಂತ್ರ-8 ಮತ್ತು ಪಿಡಿಪಿ-4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಆಯೋಗದ ಅಧಿಕೃತ ಟ್ರೆಂಡ್‌ಗಳ ಪ್ರಕಾರ, JKNC ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಅವರು ಬುಡ್ಗಾಮ್ ಮತ್ತು ಗಂದರ್‌ಬಲ್ ಎರಡೂ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ''ಜನಾದೇಶ ಒಪ್ಪಿಕೊಳ್ಳಬೇಕು. ಬಿಜೆಪಿಯು ಯಾವುದೇ ಕುತಂತ್ರಕ್ಕೆ ಮುಂದಾಗಬಾರದೆಂದು'' ಓಮರ್ ಅಬ್ದುಲ್ಲಾ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
#JammuAndKashmirElection2024 | JKNC vice president Omar Abdullah continues to lead in both seats - Budgam and Ganderbal, as per official EC trends. pic.twitter.com/xkB0P0Hhu0
— ANI (@ANI) October 8, 2024
ಲೋಕಸಭೆ ಚುನಾವಣೆ ನಡೆದ ಬಳಿಕ ಹಾಗೂ ಸಂವಿಧಾನ 370ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ 10 ವರ್ಷದ ಬಳಿಕ ನಡೆದ ಹೈವೋಲ್ಟೇಜ್ ಚುನಾವಣೆ ಇದಾಗಿದ್ದರಿಂದ ಬಹಳ ಮಹತ್ವ ಪಡೆದುಕೊಂಡಿದೆ. ಒಟ್ಟು 20 ಮತ ಎಣಿಕೆ ಕೇಂದ್ರಗಳಿದ್ದು, ಎಲ್ಲಾ ಕಡೆಗಳಲ್ಲೂ ಮೂರು ಸ್ತರದ ಭದ್ರತೆ ಕೈಗೊಳ್ಳಲಾಗಿದೆ.
ಮತ ಎಣಿಕೆ ನಿಮಿತ್ತ ಜಮ್ಮು ಮತ್ತು ಕಾಶ್ಮೀರದ ಎಲ್ಲಾ 20 ಮತ ಎಣಿಕೆ ಕೇಂದ್ರಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಪಾರದರ್ಶಕವಾಗಿ ಮತ ಎಣಿಕೆ ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ. ಯಾರಿಗೂ ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ತೆರಳಲು ಅವಕಾಶ ನೀಡಲಾಗುತ್ತಿದೆ. ಪೊಲೀಸರು ಮತ್ತು ಅರೆಸೇನಾ ಪಡೆಗಳು ಅಲರ್ಟ್ ಆಗಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಮಾಡಿದ್ದೇವೆ. ಮತ ಎಣಿಕೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲಿದೆ. ನಮ್ಮ ಎಲ್ಲಾ ಮಾನಿಟರಿಂಗ್ ಸಾಧನಗಳ ಮೂಲಕ ಗಮನಿಸಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಮತ ಎಣಿಕೆಗೆ ಮಾಡಲಾದ ಭದ್ರತಾ ವ್ಯವಸ್ಥೆಗಳ ಕುರಿತು, ಎಸ್‌ಎಸ್‌ಪಿ ರಾಜೌರಿ ರಣದೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಸೆಪ್ಟೆಂಬರ್ 18, 25 ಹಾಗೂ ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ಬಿರುಸಿನ ಮತದಾನ ನಡೆದಿತ್ತು. 10 ವರ್ಷಗಳ ಬಳಿಕ ಚುನಾವಣೆ ಕಂಡಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಫಲಿತಾಂಶವೂ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಇಂದು ಹರಿಯಾಣ, ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ: ಯಾರಿಗೆ ಸಿಹಿ-ಕಹಿ? - ELECTION RESULTS